ಮಂಡ್ಯ,ಫೆ.18- ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಿದೆ. ಹೀಗಾಗಿ ರಾಜ್ಯದಲ್ಲಿ ಒಂದೇ ವಿರೋಧಪಕ್ಷವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಳವಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪ್ರತ್ಯೇಕ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ಬಹುತೇಕ ಬಿಜೆಪಿಯೊಂದಿಗೆ ವಿಲೀನವಾದಂತಾಗಿದೆ. ಹೀಗಾಗಿ ರಾಜ್ಯದಲ್ಲಿ ಎರಡು ವಿರೋಧಪಕ್ಷಗಳಿಲ್ಲ. ಒಂದೇ ಒಂದು ವಿರೋಧಪಕ್ಷ ಇದ್ದಂತಾಗಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಯವರು 28 ಕ್ಕೆ 28 ರಲ್ಲೂ ಗೆಲ್ಲುತ್ತೇವೆ ಎಂದು ಬುರುಡೆ ಬಿಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಂತೆ ಲೋಕಸಭೆಯಲ್ಲೂ ನಮ್ಮನ್ನು ಜನ ತಿರಸ್ಕರಿಸುತ್ತಾರೆ ಎಂದು ಬಿಜೆಪಿಯವರಿಗೆ ಅರ್ಥವಾಗಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಸ್ಥಳೀಯರ ಮುಖಂಡರ ಅಭಿಪ್ರಾಯ ಆಧರಿಸಿಯೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಸ್ಥಳೀಯ ಶಾಸಕರು, ಕಳೆದ ಚುನಾವಣೆಯಲ್ಲಿ ಸೋಲು ಕಂಡವರು, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಲಾಗುವುದು. ಅವರು ಹೇಳಿದವರಿಗೆ ಟಿಕೆಟ್ ನೀಡಲಾಗುತ್ತದೆ. ಮಹದೇವಪ್ಪ ಸೇರಿದಂತೆ ಯಾರ ಹೆಸರು ಹೇಳಿದರೂ ಅವರಿಗೆ ಟಿಕೆಟ್ ನೀಡಲಾಗುತ್ತದೆ.
ಬಿಜೆಪಿ ಮತ್ತು ಜೆಡಿಎಸ್ನವರಿಗೆ ನಾನು ಮಂಡಿಸಿದ ಬಜೆಟ್ ಅರ್ಥವಾಗಿಲ್ಲ. ಬಡವರ ವಿರೋಯಾಗಿರುವವರಿಗೆ ಬಜೆಟ್ ಅರ್ಥವೂ ಆಗುವುದಿಲ್ಲ. ನಾನು ಬಡವರ ಪರವಾಗಿ ಬಜೆಟ್ ಮಂಡಿಸಿದ್ದೇನೆ ಎಂದರು.ಬಜೆಟ್ನಲ್ಲಿ ಪಂಚಖಾತ್ರಿಗಳಿಗಷ್ಟೇ ಆದ್ಯತೆ ನೀಡಿಲ್ಲ. ಮೂಲಸೌಲಭ್ಯ ಸೃಷ್ಟಿ ಹಾಗೂ ಸರ್ವತೋಮುಖ ಅಭಿವೃದ್ಧಿಗೂ ಒತ್ತು ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ಅನುದಾನದಲ್ಲಿ 1.87 ಲಕ್ಷ ಕೋಟಿ ನಷ್ಟವಾಗಿದೆ. ಅದು ಬಂದಿದ್ದರೆ ಇನ್ನಷ್ಟು ಅಭಿವೃದ್ಧಿ ಮಾಡಲು ಅವಕಾಶವಿರುತ್ತದೆ ಎಂದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಪೂರ್ವ ತಯಾರಿಗಳನ್ನು ಆರಂಭಿಸಿದೆ. ಬಿಜೆಪಿಯವರು ಹೇಳುವ ಸುಳ್ಳುಗಳನ್ನು ರಾಜ್ಯದ ಜನ ನಂಬುವುದಿಲ್ಲ ಎಂದು ಹೇಳಿದರು. ಮಳವಳ್ಳಿಗೆ ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ಬರುತ್ತಿದ್ದೇನೆ. ಮಳವಳ್ಳಿಯಲ್ಲಿ ಪಿ.ಎಂ.ನರೇಂದ್ರಸ್ವಾಮಿ ಸಮರ್ಥವಾದ ಶಾಸಕರಿದ್ದಾರೆ. ಜಿಲ್ಲಾ ಮಂತ್ರಿ ಚೆಲುವರಾಯಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪದೇಪದೇ ಮಳವಳ್ಳಿಗೆ ನಾನು ಭೇಟಿ ನೀಡುವ ಅಗತ್ಯವಿಲ್ಲ ಎಂದರು.