Sunday, February 16, 2025
Homeಬೆಂಗಳೂರುಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಪತ್ನಿಗೆ ಚಾಕು ಇರಿದ ಪತಿ

ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಪತ್ನಿಗೆ ಚಾಕು ಇರಿದ ಪತಿ

ಬೆಂಗಳೂರು, ಫೆ.18- ಮೊಬೈಲ್ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಪತ್ನಿಯ ನಡತೆಯನ್ನು ಅನುಮಾನಿಸಿ ಪತಿ ಚಾಕುವಿನಿಂದ ಆಕೆಯ ಕಾಲಿಗೆ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ದಿವ್ಯಶ್ರೀ (27) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಕೆಯ ಪತಿ ಜಯಪ್ರಕಾಶ್ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 2019ರಲ್ಲಿ ದಿವ್ಯಶ್ರೀ ಹಾಗೂ ಜಯಪ್ರಕಾಶ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಮೂಡಲಪಾಳ್ಯದಲ್ಲಿ ವಾಸವಾಗಿದ್ದ ಇವರು ನಂತರ ಸುಂಕದಕಟ್ಟೆಯ ಸೊಲ್ಲಾಪುರದಮ್ಮ ದೇವಸ್ಥಾನದ ಬಳಿ ಮನೆಯಲ್ಲಿ ವಾಸವಾಗಿದ್ದರು. ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಜಯಪ್ರಕಾಶ್ ಸಹೋದರಿಯ ನಿಶ್ಚಿತಾರ್ಥ ನಡೆದಿತ್ತು. ಇದರಲ್ಲಿ ಪತ್ನಿ ದಿವ್ಯಶ್ರೀ ಭಾಗಿಯಾಗಿರಲಿಲ್ಲ. ಇದರಿಂದ ಆತ ಆಕ್ರೋಶಗೊಂಡಿದ್ದ.

ಕಳೆದ 15ರಂದು ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಜಯಪ್ರಕಾಶ್ ಏಕಾಏಕಿ ಚಾಕುವಿನಿಂದ ದಿವ್ಯಶ್ರೀ ಮೇಲೆ ದಾಳಿ ನಡೆಸಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಾಲಿಗೆ ಇರಿತದ ಗಾಯವಾಗಿ ಕುಸಿದು ಬಿದ್ದಿದ್ದಾಳೆ. ಗಲಾಟೆಯಾಗುತ್ತಿರುವುದನ್ನು ನೋಡಿ ಅಕ್ಕಪಕ್ಕದವರು ಬರುತ್ತಿದ್ದಂತೆ ಜಯಪ್ರಕಾಶ್ ಅಲ್ಲಿಂದ ಕಾಲ್ಕಿತ್ತಿದ್ದ. ಕೂಡಲೇ ದಿವ್ಯಶ್ರೀಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿ ಜಯಪ್ರಕಾಶ್ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ದಿವ್ಯಶ್ರೀ ಮೊಬೈಲ್ನಲ್ಲೇ ಹೆಚ್ಚು ಕಾಲ ಯಾರ್ಯಾರೋ ಜತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಳಂತೆ. ಈ ಬಗ್ಗೆ ಹಲವಾರು ಬಾರಿ ಗಲಾಟೆ ನಡೆದಿತ್ತು. ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡು ಜಯಪ್ರಕಾಶ್ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES

Latest News