ಬೆಂಗಳೂರು, ಫೆ.25- ರಾಜ್ಯ ಸರ್ಕಾರದ ಸಹಕಾರದೊಂದಿಗೆ ಲೀಗಲ್ ಕರ್ನಾಟಕ.ಕಾಂ ಮೂಲಕ ಮನೆಬಾಗಿಲಿಗೆ ಇ-ಸ್ಟಾಂಪ್ ಪೇಪರ್ ಹಾಗೂ ಕಾನೂನು ದಾಖಲೆ ಕರಡು ಪ್ರತಿ (ಡ್ರಾಫ್ಟ್) ತಲುಪಿಸುವ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದೆ.
ಮನೆ ಬಾಡಿಗೆ ಅಥವಾ ಲೀಸ್‍ಗೆ ಸಂಬಂಧಪಟ್ಟಂತೆ ಒಪ್ಪಂದ ಮಾಡಿಕೊಳ್ಳಲು ಇ-ಸ್ಟಾಂಪ್ ಪತ್ರಕ್ಕಾಗಿ ಸಹಕಾರಿ ಸೊಸೈಟಿಗಳಿಗೆ ತೆರಳಬೇಕಿತ್ತು. ಕೆಲವು ಸಂದರ್ಭದಲ್ಲಿ ರಜೆ ಅಥವಾ ಸರ್ವರ್ ಸಮಸ್ಯೆಯಿಂದ ತುರ್ತಾಗಿ ಬೇಕಾದಾಗ ಇದು ಸಿಗುತ್ತಿರಲಿಲ್ಲ. ಪ್ರತಿನಿತ್ಯ ಸಾರ್ವಜನಿಕರ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ 24 ಗಂಟೆ ಕಾಲ ಆನ್‍ಲೈನ್ ಮೂಲಕ ಇ-ಸ್ಟಾಂಪ್ ಪೇಪರ್ (ಒಪ್ಪಂದ ಪತ್ರ), ಕಾನೂನು ದಾಖಲೆ ಕರಡು ಪ್ರತಿಯನ್ನು ಜನರಿಗೆ ತಲುಪಿಸುವ ಸೇವೆಯನ್ನು ಸಂಸ್ಥೆ ಪ್ರಾರಂಭಿಸಲಿದೆ.
ಸರ್ಕಾರ ಪತನದ ಕನಸು ಈಡೇರಲ್ಲ: ಸಚಿವ ಎಂ.ಬಿ.ಪಾಟೀಲ್
ಇ-ಸ್ಟಾಂಪ್ ಪೇಪರ್ ಜತೆಗೆ ಒಪ್ಪಂದ ಮಾಡಿಕೊಳ್ಳಲು ಬೇಕಾದ ಅಂಶಗಳನ್ನೊಳಗೊಂಡ ಪ್ರತಿಯೂ ಸಿಗಲಿದೆ. ಇದಕ್ಕಾಗಿ ಸಂಸ್ಥೆ ಪ್ರತ್ಯೇಕವಾಗಿ ಲೀಗಲ್ ಕರ್ನಾಟಕ.ಕಾಂ ವೆಬ್‍ಸೈಟ್ ಸಿದ್ಧಪಡಿಸಿದೆ. ಕರಾರು ಒಪ್ಪಂದ ಮಾಡಿಕೊಳ್ಳುವವರು ವೆಬ್‍ಸೈಟ್‍ನಲ್ಲಿ ತಮ್ಮ ವಿವರಗಳನ್ನು ನಮೂದಿಸಿದರೆ ಅರ್ಧ ಗಂಟೆಯಲ್ಲಿ ಇ-ಸ್ಟಾಂಪ್ ಆಧಾರಿತ ಕರಡು ಪ್ರತಿಯು (ಡ್ರಾಫ್ಟ್) ಗ್ರಾಹಕರು ಇರುವ ಜಾಗದಲ್ಲೇ ಬರಲಿದೆ.
ರಾಜ್ಯ ಸರ್ಕಾರವು 2008ರಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆ ಜಾರಿಗೊಳಿಸಿತ್ತು. ಅದರಂತೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಆಸ್ತಿ ಖರೀದಿ ಮತ್ತು ಮಾರಾಟ ನೋಂದಣಿಗೆ, ಮನೆ ಲೀಸ್ ಅಥವಾ ಬಾಡಿಗೆಗೆ ಮಾಡಿಕೊಳ್ಳಲು, ಪರಸ್ಪರ ಪಾಲುದಾರಿಕೆಗೆ, ಆಸ್ತಿಗಳ ಅಡಮಾನಕ್ಕೆ, ಸಾಲ ಪಡೆಯುವುದಕ್ಕೆ, ಆಸ್ತಿ ವರ್ಗಾವಣೆಗೆ, ವ್ಯವಹಾರ ನಡೆಸುವುದಕ್ಕೆ, ಕಟ್ಟಡ, ಗುತ್ತಿಗೆ ಒಪ್ಪಂದಕ್ಕೆ, ಮಾದರಿ ಸೇವಾ, ಸಹಭಾಗಿತ್ವ ಸೇರಿ ವಿವಿಧ ಬಗೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಇ-ಸ್ಟಾಂಪ್ ಪೇಪರ್ ಅವಶ್ಯಕತೆ ಇರುತ್ತದೆ.
ಹಾಗಾಗಿ ಈ ಮೇಲಿನ ಯಾವುದೇ ವ್ಯವಹಾರವನ್ನೂ ಇ-ಸ್ಟಾಂಪ್ ಪೇಪರ್ ಮೂಲಕ ಅಧಿಕೃತ ಒಪ್ಪಂದ ಮಾಡಿಕೊಂಡು ಕಾನೂನು ಬದ್ಧತೆ ದೃಢೀಕರಿಸಲಾಗುತ್ತದೆ. ಹಾಗಾಗಿ ಈ ಸಂಸ್ಥೆಯು ಒಪ್ಪಂದ ಪತ್ರ, ಅಫಿಡವಿಟ್‍ಗಳಿಂದ ಹಿಡಿದು ಡೀಡ್‍ಗಳ ಜತೆಗೆ ಲೀಗಲ್ ಡಾಕ್ಯುಮೆಂಟ್ ಡ್ರಾಫ್ಟಿಂಗ್ ಸೇವೆಯನ್ನೂ ಪರಿಣತ ಕಾನೂನು ತಂಡದಿಂದ ಒದಗಿಸಲಿದೆ.