ಬೆಂಗಳೂರು, ಜು. 31- ನಾಳೆಯಿಂದ ದೇಶಾದ್ಯಂತ ಹಲವು ಅಗತ್ಯ ವಸ್ತುಗಳು ಮತ್ತು ಬಳಕೆದಾರ ಉತ್ಪನ್ನಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದ್ದು, ಇದರ ನೇರ ಪರಿಣಾಮ ಮಧ್ಯಮ ವರ್ಗದ ಮೇಲೆ ಬೀಳಲಿದೆ. ಎಫ್ಎಂಸಿಜಿ ಉತ್ಪನ್ನಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಸ್ಮಾರ್ಟ್ಫೋನ್ ಹಾಗೂ ಕಾರುಗಳವರೆಗೆ ಹಲವು ವಿಭಾಗಗಳಲ್ಲಿ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡಲು ಮುಂದಾಗಿವೆ.
ದೈನಂದಿನ ಬಳಕೆಯ ಟೀ, ಸಾಬೂನು, ಹೇರ್ ಆಯಿಲ್, ಪ್ಯಾಕೇಜ್್ಡ ಆಹಾರ ಸೇರಿದಂತೆ ಎಫ್ಎಂಸಿಜಿ ಉತ್ಪನ್ನಗಳ ಬೆಲೆ ಶೇ.6ರಿಂದ 8ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಚ್ಚಾ ವಸ್ತುಗಳ ದರ, ಪಾಮ್ ಆಯಿಲ್ ಬೆಲೆ ಹಾಗೂ ಪ್ಯಾಕೇಜಿಂಗ್ ವೆಚ್ಚ ಹೆಚ್ಚಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿಗಳು ತಿಳಿಸಿವೆ.
ಎಲೆಕ್ಟ್ರಾನಿಕ್್ಸ ಕ್ಷೇತ್ರದಲ್ಲಿಯೂ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಟೆಲಿವಿಷನ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಶೇ.4ರಿಂದ 6ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ.
ಸ್ಮಾರ್ಟ್ಫೋನ್ಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಮೆಮೊರಿ ಚಿಪ್ಗಳ ಬೆಲೆ ಏರಿಕೆ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಸಮಸ್ಯೆಗಳು ಮೊಬೈಲ್ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿವೆ.ಆಟೋಮೊಬೈಲ್ ಕ್ಷೇತ್ರದಲ್ಲೂ ಹಲವು ಕಂಪನಿಗಳು ಬೆಲೆ ಪರಿಷ್ಕರಣೆ ಘೋಷಿಸಿವೆ.
ಮಾರುತಿ ಸುಜುಕಿ ತನ್ನ ವಿವಿಧ ಕಾರು ಮಾದರಿಗಳ ಬೆಲೆಯನ್ನು 30 ಸಾವಿರದವರೆಗೆ ಹೆಚ್ಚಿಸಲು ನಿರ್ಧರಿಸಿದ್ದು, ಹೋಂಡಾ ಹಾಗೂ ಮರ್ಸಿಡಿಸ್ ಬೆನ್್ಜ ಕೂಡ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಮತ್ತು ಉತ್ಪಾದನಾ ವೆಚ್ಚ ಏರಿಕೆ ಇದಕ್ಕೆ ಕಾರಣವಾಗಿದೆ.
ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಬಿಕ್ಕಟ್ಟು, ಕಚ್ಚಾ ತೈಲದ ಬೆಲೆ ಏರಿಕೆ, ಸಮುದ್ರ ಸಾರಿಗೆ ವೆಚ್ಚ ಹೆಚ್ಚಳ, ಜಾಗತಿಕ ಪೂರೈಕೆ ಸರಪಳಿಯ ಅಸ್ತವ್ಯಸ್ತತೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತವೂ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.ಈಗಾಗಲೇ ಹಣದುಬ್ಬರದಿಂದ ಸಂಕಷ್ಟ ಎದುರಿಸುತ್ತಿರುವ ಸಾಮಾನ್ಯ ಜನರಿಗೆ ಈ ಬೆಲೆ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ತರಲಿದ್ದು, ಕುಟುಂಬಗಳ ಮಾಸಿಕ ಖರ್ಚಿನ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುವ ಸಾಧ್ಯತೆ ಇದೆ.
