ಬೆಂಗಳೂರು,ಫೆ.27- ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸುತ್ತಿದ್ದಂತೆ ಅಕ್ಕಪಕ್ಕ ನಿಂತಿದ್ದ ಬಸವರಾಜ ಬೊಮ್ಮಾಯಿ ಮತ್ತು ಆರ್.ಅಶೋಕ್ ಸದ್ದಿಲ್ಲದಂತೆ ಜಾಗ ಖಾಲಿ ಮಾಡಿದ ಪ್ರಸಂಗ ನಡೆಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‍ರೊಂದಿಗೆ ಕುಮಾರಸ್ವಾಮಿಯವರು ರಾಜ್ಯಸಭೆ ಚುನಾವಣೆಯ ಮತಗಟ್ಟೆಯ ಸುತ್ತಮುತ್ತ ಓಡಾಡುತ್ತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಲು ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಅವರ ಬೆನ್ನ ಹಿಂದೆಯೇ ಕುಮಾರಸ್ವಾಮಿ ಯವರು ಬಂದರು. ಬಿಜೆಪಿ ಶಾಸಕರಾದ ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್‍ರವರು ಮತ ಹಾಕಲು ಬರದೇ ಇದ್ದವರ ಬಗ್ಗೆ ಪ್ರಶ್ನೆಗಳು ಎದುರಾದವು. ಅದಕ್ಕೆ ಉತ್ತರಿಸಿದ ಆರ್.ಅಶೋಕ್, ಶಿವರಾಂ ಹೆಬ್ಬಾರ್ ತಮ್ಮೊಂದಿಗೆ ಚರ್ಚೆ ಮಾಡಿದ್ದು, 10.30 ಸುಮಾರಿಗೆ ಆಗಮಿಸಿ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ಎಸ್.ಟಿ.ಸೋಮಶೇಖರ್‍ರವರೊಂದಿಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್‍ರವರು ಈಗಾಗಲೇ ಹೇಳಿಕೆ ನೀಡಿದ್ದು, ಅಭಿವೃದ್ಧಿಗೆ ನನ್ನ ಮತ ಎಂದಿದ್ದಾರೆ ಎಂಬ
ಉಪಪ್ರಶ್ನೆ ಎದುರಾದಾಗ ಬಸವರಾಜ ಬೊಮ್ಮಾಯಿಯವರು, ಈ ಹಿಂದೆ ಎಸ್.ಟಿ.ಸೋಮಶೇಖರ್ ಅವರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ಅಭಿವೃದ್ಧಿಯೂ ಆಗಿದೆ ಎಂದು ಸಮರ್ಥನೆ ನೀಡಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕುಮಾರಸ್ವಾಮಿಯವರು, ಬಿಜೆಪಿ ಸರ್ಕಾರದಲ್ಲಿ ಎಸ್.ಟಿ.ಸೋಮಶೇಖರ್ 3 ವರ್ಷ ಸಚಿವರಾಗಿ ಕೆಲಸ ಮಾಡಿದ್ದಾರೆ.ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋಗುವಾಗ ಅಭಿವೃದ್ಧಿ ಕಾರಣಕ್ಕಾಗಿ ಪಕ್ಷಾಂತರ ಮಾಡುತ್ತಿರುವುದಾಗಿ ಹೇಳಿದರು.
ಬಿಜೆಪಿ ಆಡಳಿತದಲ್ಲಿ ಯಥೇಚ್ಚವಾಗಿ ಅನುದಾನ ಪಡೆದಿದ್ದಾರೆ. ಇದರಿಂದ ವೈಯಕ್ತಿಕವಾಗಿ ಅವರ ಅಭಿವೃದ್ಧಿಯಾಗಿದೆ, ಕ್ಷೇತ್ರದ ಅಭಿವೃದ್ಧಿ ಆಗಿಲ್ಲ ಎಂದು ಕಂಡುಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕರ ಬಗ್ಗೆ ಕುಮಾರಸ್ವಾಮಿಯವರ ಟೀಕಾ ಪ್ರಹಾರ ಬಸವರಾಜ ಬೊಮ್ಮಾಯಿ ಮತ್ತು ಅಶೋಕ್‍ರಿಗೆ ಇರಿಸು ಮುರಿಸು ಉಂಟು ಮಾಡಿತು. ತಕ್ಷಣವೇ ಅವರು ಅಲ್ಲಿಂದ ನಿರ್ಗಮಿಸಿದರು.