Sunday, November 24, 2024
Homeಬೆಂಗಳೂರು4 ಡ್ರಗ್ ಪೆಡ್ಲರ್‌ಗಳ ಬಂಧನ : 2.35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

4 ಡ್ರಗ್ ಪೆಡ್ಲರ್‌ಗಳ ಬಂಧನ : 2.35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು, ಫೆ.27- ಸಿಸಿಬಿ ಪೊಲೀಸರು ಡ್ರಗ್ ಪೆಡ್ಲರ್‍ಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡು ಮೂವರು ವಿದೇಶಿ ಡ್ರಗ್ ಪೆಡ್ಲರ್‍ಗಳು ಸೇರಿದಂತೆ ನಾಲ್ವರನ್ನು ಬಂಧಿಸಿ ಅವರುಗಳಿಂದ ಒಟ್ಟು 2.35 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 730 ಗ್ರಾಂ ಎಂ.ಡಿ.ಎಂಎ ಕ್ರಿಸ್ಟೆಲ್, 1273 ಎಕ್ಸ್‍ಟಸಿ ಪಿಲ್ಸ್‍ಗಳು, 42 ಗ್ರಾಂ ಹೈಡ್ರೋಗಾಂಜ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ 4 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಇಬ್ಬರು ವಿದೇಶಿ ಡ್ರಗ್‍ಪೆಡ್ಲರ್‍ಗಳು ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದರು. ಒಬ್ಬ ಮೊದಲಿಗೆ ಮುಂಬೈನಲ್ಲಿ ನೆಲೆಸಿ ಎನ್‍ಡಿಪಿಎಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದನು. ಈತನು ಜೈಲಿನಿಂದ ಬಿಡುಗಡೆಯಾದ ನಂತರ ನಗರಕ್ಕೆ ಬಂದು ಮತ್ತೊಬ್ಬ ವಿದೇಶಿ ಡ್ರಗ್‍ಪೆಡ್ಲರ್‍ನ ಜೊತೆಗೂಡಿ ಪರಿಚಯಸ್ಥ ಗಿರಾಕಿಗಳಿಗೆ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದುದ್ದು ತನಿಖೆಯಿಂದ ತಿಳಿದು ಬಂದಿದೆ.

ಎಸ್‍ಟಿಎಸ್ ವಿರುದ್ಧ ಹೆಚ್‌ಡಿಕೆ ಟೀಕೆ: ಸ್ಥಳದಿಂದ ಕಾಲ್ಕಿತ್ತ ಅಶೋಕ್, ಬೊಮ್ಮಾಯಿ

ಈ ಪ್ರಕರಣದಲ್ಲಿ 51 ಲಕ್ಷ ಮೌಲ್ಯದ 500 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 2 ಮೊಬೈಲ್ ಫೋನ್‍ಗಳು ಹಾಗೂ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಓರ್ವ ವಿದೇಶಿ ಡ್ರಗ್‍ಪೆಡ್ಲರ್ ಕಳೆದ ಫೆಬ್ರವರಿಯಲ್ಲಿ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಇಲ್ಲಿನ ಪರಿಚಯಸ್ಥ ಮತ್ತು ಇತರೆ ವಿದೇಶಿ ಪ್ರಜೆಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದನು.

ಈತನಿಂದ 1.81 ಕೋಟಿ ಮೌಲ್ಯದ 236 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 1273 ಎಕ್ಸ್‍ಟಸಿ ಪಿಲ್ಸ್‍ಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮೊಬೈಲ್ ಫೋನ್‍ನ್ನು ವಶಪಡಿಸಿಕೊಳ್ಳಲಾಗಿದೆ. ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯು ಇಂಡಿಯನ್ ಫೋಸ್ಟ್ ಮೂಲಕ ಹೈಡ್ರೋಗಾಂಜಾವನ್ನು ಖರೀದಿಸಿ ತರಿಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ, ಆತನನ್ನು ವಶಕ್ಕೆ ಪಡೆದುಕೊಂಡು 3 ಲಕ್ಷ ಮೌಲ್ಯದ 42 ಗ್ರಾಂ ಹೈಡ್ರೋಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‍ನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕೈಗೊಂಡಿತ್ತು.

RELATED ARTICLES

Latest News