ಬೆಂಗಳೂರು,ಫೆ.27-ಬಿಜೆಪಿ-ಜೆಡಿಎಸ್ ಮೈತ್ರಿ ಸರಿಯಿದೆಯೋ, ಇಲ್ಲವೋ ಎಂಬುದನ್ನು ರಾಜ್ಯಸಭೆ ಚುನಾವಣಾ ಫಲಿತಾಂಶ ನೀಡಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಮತದಾರರು ಹಾಗೂ ಶಾಸಕರು ಒಪ್ಪಿಕೊಳ್ಳಬೇಕು. ಅದು ಸರಿಯೇ ಅಥವಾ ಇಲ್ಲವೇ ಎಂಬುದನ್ನು ಜನ ತೀರ್ಮಾನಿಸಬೇಕು. ಈ ಫಲಿತಾಂಶ ಅದನ್ನು ಸಾಬೀತು ಪಡಿಸಲಿದೆ ಎಂದರು.
ಚುನಾವಣಾ ಅಭ್ಯರ್ಥಿಗಳು ಆತ್ಮಸಾಕ್ಷಿ ಮತ ಕೇಳಿದ್ದರು. ಅದರಂತೆ ಮತಗಳು ಚಲಾವಣೆಯಾಗಿರಬಹುದು. ಎಸ್.ಟಿ.ಸೋಮಶೇಖರ್ ಅವರು ಯಾರ ಪರ ಮತ ಹಾಕಿದ್ದಾರೆ ಗೊತ್ತಿಲ್ಲ. ಅವರ ಹೇಳಿಕೆ ನೋಡಿಲ್ಲ. ಒಂದು ವೇಳೆ ಅಡ್ಡ ಮತದಾನವಾಗಿದ್ದರೆ ಅದರ ಕುರಿತು ಹೇಳಿಕೆ ನೀಡಬೇಕಿರುವುದು ಬಿಜೆಪಿ ಎಂದು ಸ್ಪಷ್ಟಪಡಿಸಿದರು.
ನಾಲ್ವರು ಮೊಬೈಲ್ ಸುಲಿಗೆಕೋರರ ಬಂಧನ: 70 ಮೊಬೈಲ್ ವಶ
ಜೆಡಿಎಸ್‍ನ ಕುಪೇಂದ್ರರೆಡ್ಡಿ ಅವರನ್ನು ಗೆಲ್ಲಿಸಲು ಬಿಜೆಪಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಲು 45 ಮತಗಳು ಬೇಕಿತ್ತು. ಬಾಕಿ ಉಳಿದ ಮತಗಳನ್ನು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ ಹಾಕಿಸಬಹುದಿತ್ತು. ಆದರೆ ಬಿಜೆಪಿ ತಮ್ಮ ಅಭ್ಯರ್ಥಿಗೆ 48 ಮತಗಳನ್ನು ಹಾಕಿಸಿದೆ. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಆಸಕ್ತಿ ವಹಿಸಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.