ಬೆಂಗಳೂರು,ಫೆ.28- ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ವಿಧಾನಸಭೆಯಲ್ಲಿ ನಡೆಯಿತು. ರಾಜ್ಯಸಭೆ ಚುನಾವಣೆ ಫಲಿತಾಂಶದ ನಂತರ ನಡೆದ ವಿಜಯೋತ್ಸವದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದಡಿ ಬಿಜೆಪಿ ಶಾಸಕ ವಿ.ಸುನಿಲ್‍ಕುಮಾರ್ ಮಾತನಾಡುವಾಗ ಶಾಸಕರ ಮನೆಗೆ ಬೆಂಕಿ ಹಾಕಿದವರನ್ನು ಅಮಾಯಕರು, ಕುಕ್ಕರ್ ಬಾಂಬ್ ಆರೋಪಿಯನ್ನು ಬ್ರದರ್ ಎಂದು ಕರೆದರು ಎಂದು ಹೇಳಿ ಬಳಸಿದ ಶಬ್ದ ಕಾಂಗ್ರೆಸ್ ಶಾಸಕರನ್ನು ಕೆರಳಿಸಿತು.
ಇದಕ್ಕೆ ಕಾಂಗ್ರೆಸ್‍ನವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಯು.ಟಿ.ಖಾದರ್, ವಿಷಯದ ಬಗ್ಗೆ ಕಾಳಜಿ ಇದ್ದರೆ ಚರ್ಚೆ ಮಾಡಿ, ರಾಜಕೀಯ ಏಕೆ ಪ್ರಸ್ತಾಪ ಮಾಡುತ್ತೀರಿ ಎಂದರು. ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಅವರು ಎಷ್ಟೇ ಪ್ರಚೋದಿಸಿ ಮಾತನಾಡಿದರೂ ಸುಮ್ಮನೇ ಇದ್ದೇವೆ. ವಿಷಯದ ವಾಸ್ತವತೆ ಮೇಲೆ ಬೆಳಕು ಚೆಲ್ಲುತ್ತಿಲ್ಲ. ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಸುಳ್ಳುಗಳ ಕಟ್ಟುಕಥೆ ಕಟ್ಟುತ್ತಿದ್ದಾರೆ.
ಸುನಿಲ್‍ಕುಮಾರ್ ಪ್ರಸ್ತಾಪಿಸಿದ ಶಬ್ದವನ್ನು ಕಡತದಿಂದ ತೆಗೆಯಬೇಕು ಎಂದಾಗ ಪರಿಶೀಲಿಸುವ ಭರವಸೆಯನ್ನು ಸಭಾಧ್ಯಕ್ಷರು ನೀಡಿದರು. ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ಕಡತದಿಂದ ಏಕೆ ತೆಗೆಯಬೇಕೆಂದು ಆಕ್ಷೇಪಿಸಿದರು. ಈ ಹಂತದಲ್ಲಿ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ, ಸಚಿವ ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಾತುಮುಂದುವರೆಸಿದ ಸುನಿಲ್‍ಕುಮಾರ್ ಸರ್ಜಿಕಲ್ ಸ್ಟ್ರೈಕ್ ಆದಾಗ ಸಾಕ್ಷಿ ಕೇಳಿದ್ದು ಯಾವ ಪಕ್ಷ ಎಂದು ಪ್ರಶ್ನಿಸಿದರು.
ಪಾಕ್ ಪರ ಘೋಷಣೆ ಪ್ರಕರಣವನ್ನು NIAಗೆ ವಹಿಸಲು ಸುನಿಲ್‍ಕುಮಾರ್ ಒತ್ತಾಯ
ಆಗಲೂ ಏರಿದ ಧ್ವನಿಯಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಕೃಷ್ಣಭೈರೇಗೌಡ ಮಾತನಾಡಿ, 40 ಸೈನಿಕರು ಮೃತಪಟ್ಟರೂ ಯಾರನ್ನಾದರೂ ಬಂಸಿದ್ದಾರಾ? ಅವರ ಸಾವಿಗೆ ಯಾರು ಕಾರಣ? 5 ವರ್ಷವಾಯಿತು ಯಾವೊಬ್ಬ ಕಾರಣಕರ್ತರನ್ನು ಪತ್ತೆ ಹಚ್ಚಿಲ್ಲ ಎಂದರು. ಇದಕ್ಕೆ ಸಚಿವ ಶಿವರಾಜ್ ತಂಗಡಗಿ ಧ್ವನಿಗೂಡಿಸಿ ಮಾತನಾಡಿದರು. ಆಗ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಲು ಮುಂದಾದಾಗ ನಾಳೆ ಬೆಳಿಗ್ಗೆಯವರೆಗೂ ಮಾತನಾಡಲು ಅವಕಾಶ ಕೊಡಲಾಗುವುದು. ಯಾರ್ಯಾರು ಮಾತನಾಡಬೇಕೆನ್ನುತ್ತೀರೊ ಅವರ ಪಟ್ಟಿ ಕೊಡಿ ಎಂದು ಸಭಾಧ್ಯಕ್ಷರು ಕೇಳಿದರು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಘೋಷಣೆ ಕೂಗಿ ವ್ಯಕ್ತಿಯನ್ನು ರಾಜಾಜಿನಗರದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅವರ ಬಾಯಿ ಮುಚ್ಚಿದ್ದಾರೆ. ಆ ರೀತಿ ಘೋಷಣೆ ಕೂಗದೇ ಇದ್ದರೆ ಏಕೆ ಬಾಯಿ ಮುಚ್ಚಬೇಕಿತ್ತು ಎಂದು ಪ್ರಶ್ನಿಸಿದರು.