ಬೆಂಗಳೂರು,ಫೆ.28- ವಿಧಾನಸೌಧದಲ್ಲಿ ನಿನ್ನೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ವಿಚಾರ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆಗೆ ಗ್ರಾಸವಾಗಿದ್ದಲ್ಲದೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ರಣಾಂಗಣವನ್ನೇ ನಿರ್ಮಿಸಿತ್ತು. ಹಲವು ಬಾರಿ ಗದ್ದಲಗಳಾಗಿ 2 ಬಾರಿ ಕಲಾಪ ಮುಂದೂಡ ಬೇಕಾಯಿತು. ಘಟನೆಯ ನೈತಿಕ ಹೊಣೆ ಹೊತ್ತು ಸರ್ಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಧರಣಿ ನಡೆಸಿದೆ. ಘಟನೆ ಕುರಿತು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ಚರ್ಚೆಗೆ ಅವಕಾಶ ಕೇಳಿದರು. ಈ ಹಂತದಲ್ಲಿ ಬಿಜೆಪಿ ಶಾಸಕರು ರಾಷ್ಟ್ರಧ್ವಜದೊಂದಿಗೆ ವಿಧಾನಸಭೆಗೆ ಆಗಮಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಚರ್ಚೆ ಮಾಡಿದ ಆರ್.ಅಶೋಕ್‍ರವರು ಘಟನೆಯ ಹಿಂದಿರುವ ಶಕ್ತಿಗಳನ್ನು ಮಟ್ಟ ಹಾಕಬೇಕು. ರಾಜ್ಯಸಭೆಗೆ ಆಯ್ಕೆಯಾದ ನಾಸಿರ್ ಹುಸೇನ್‍ರ ಗೆಲುವಿನ ಸಂಭ್ರಮಾಚರಣೆ ವೇಳೆಯಲ್ಲೇ ಈ ರೀತಿ ಘೋಷಣೆ ಕೂಗಿರುವುದು ಗಮನಾರ್ಹ. ಅವರನ್ನು ಯಾರು ಕರೆತಂದಿದ್ದರು ಎಂಬ ವಿಚಾರಗಳು ಚರ್ಚೆಯಾಗಬೇಕು. ಸರ್ಕಾರ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದೆ. ಈವರೆಗೂ ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ ಎಂದು ಕಿಡಿಕಾರಿದರು.
ವಿ.ಸುನಿಲ್‍ಕುಮಾರ್‍ರವರು ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ)ದಿಂದ ವಿಚಾರಣೆಯಾಗಬೇಕೆಂದು ಆಗ್ರಹಿಸಿದರು. ಬಸನಗೌಡ ಪಾಟೀಲ್ ಯತ್ನಾಳ್, ಇಲ್ಲಿನ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನದ ಪರವಾಗಿ ಪ್ರೀತಿ ತೋರಿಸುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಚರ್ಚೆಗಳು ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡು ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್, ದೇಶ ವಿಭಜನೆ, ಪಾಕ್ ಪರವಾದ ಧ್ವಜಾರೋಹಣದ ಆರೋಪ, ದೇಶಪ್ರೇಮ ಸೇರಿದಂತೆ ಹಲವು ವಿಚಾರಗಳ ಪ್ರಸ್ತಾಪಕ್ಕೆ ಕಾರಣವಾಯಿತು.
ಬಿಜೆಪಿ ಸದಸ್ಯರು, ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಶಾಸಕರು ದೇಶಭಕ್ತಿಯ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ, ದೇಶವಿಭಜನೆಯನ್ನು ಮೊದಲು ಪ್ರಸ್ತಾಪಿಸಿದ್ದೇ ಬಿಜೆಪಿ ಸಿದ್ದಾಂತ ಆಧಾರಿತ ನಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟಕ್ಕೇ ಸುಮ್ಮನಾಗದ ಕಾಂಗ್ರೆಸ್ ಶಾಸಕರು, ಹಲವು ಕಡೆಗಳಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರು ಹಾಗೂ ಧ್ವಜಾರೋಹಣ ಮಾಡಿದವರು ಸಿಕ್ಕಿಬಿದ್ದಿದ್ದಾರೆ. ಅವರ ಹಿನ್ನೆಲೆ ನೋಡಿದರೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಅನ್ಯ ಧರ್ಮದವರ ಮೇಲೆ ಗೂಬೆ ಕೂರಿಸುವ ಹುನ್ನಾರಗಳು ನಡೆದಿದೆ ಎಂದು ಕಿಡಿಕಾರಿದರು. ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ, ತಮ್ಮ ಕ್ಷೇತ್ರದಲ್ಲಿ 2020, 2022 ರಲ್ಲಿ 2 ಪ್ರತ್ಯೇಕ ಪ್ರಕರಣಗಳು ನಡೆದಿವೆ. ಅದನ್ನು ಬಜರಂಗದಳ ಹಾಗೂ ಬಿಜೆಪಿ ಬೆಂಬಲಿತ ಸಂಘಟನೆಯವರು ಮಾಡಿ ಅಲ್ಪಸಂಖ್ಯಾತರ ತಲೆಗೆ ಕಟ್ಟುವ ಹುನ್ನಾರ ನಡೆಸಿದ್ದರು. ಪ್ರತಿಬಾರಿಯೂ ಈ ರೀತಿಯ ಸಂಚು ನಡೆದಿದೆ. ನಿನ್ನೆ ವಿಧಾನಸೌಧದಲ್ಲಿ ನಡೆದ ಘಟನೆ ಬಗ್ಗೆಯೂ ನಮಗೆ ಅನುಮಾನಗಳಿವೆ. ಒಂದು ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೇ ಆಗಿದ್ದರೆ ಅಂತವರನ್ನು ಗಲ್ಲಿಗೆ ಹಾಕಿ ಎಂದು ಒತ್ತಾಯಿಸಿದರು.
ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾಕಿಸ್ತಾನ ಪರ ಘೋಷಣೆ ಕೂಗುವವರು ತಾಯ್ಗಂಡರು ಎಂದು ಆಕ್ರೋಶಭರಿತ ವಾಗ್ದಾಳಿ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‍ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ, ಆರೋಪಿಗಳ ವಿರುದ್ಧ ಟೀಕೆ ಮಾಡಲು ನಮ್ಮ ಆಕ್ಷೇಪವಿಲ್ಲ. ಆದರೆ ಸದನದಲ್ಲಿ ಬಳಸಬೇಕಾದ ಭಾಷೆಗಳ ಬಗ್ಗೆ ನಿಯಮಾವಳಿಗಳನ್ನು ಅನುಸರಿಸಬೇಕಾಗುತ್ತದೆ. ಅವರ ರೀತಿಯಲ್ಲಿಯೇ ನಾವೂ ಕೂಡ ಬೋ… ಮಕ್ಕಳು, ಸೂ… ಮಕ್ಕಳು ಎಂದು ಬಳಸಬೇಕಾಗುತ್ತದೆ. ಅದಕ್ಕೂ ಅವಕಾಶ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್, ಪಾಕಿಸ್ತಾನದ ಪರವಾಗಿರುವವರನ್ನು ಖಂಡಿಸಲು ನೀವು ಯಾವುದೇ ಭಾಷೆಯನ್ನು ಬಳಸಿದರೂ ಅದಕ್ಕೆ ನಾನು ಅನುಮತಿ ಕೊಡುತ್ತೇನೆ ಎಂದು ಪ್ರಕಟಿಸಿ ಯತ್ನಾಳ್ ಅವರನ್ನು ಬೆಂಬಲಿಸಿದರು. ಮುಂದುವರೆದ ಸಭಾಧ್ಯಕ್ಷರು ತಾವೂ ಕೂಡ ಬೋ… ಮಕ್ಕಳು ಎಂಬ ಕಠಿಣ ಪದ ಬಳಸಿ ದೇಶದ್ರೋಹಿಗಳ ವಿರುದ್ಧ ಕಿಡಿಕಾರಿದರು.
ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್, ನಿಮ್ಮಂತ ದೇಶ ಭಕ್ತರು ಅಭಿನಾಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಭಾಧ್ಯಕ್ಷರು ನಾವೆಲ್ಲಾ ಭಾರತೀಯರು ಎಂದು ಸಮರ್ಥಿಸಿಕೊಂಡರು. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲಾ ಶಾಸಕರು ಪಕ್ಷಬೇಧ ಮರೆತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಂಡು ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಒತ್ತಾಯಿಸಿದರು. ಬಿಜೆಪಿಯವರು ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ಸಿಗರು ಆಕ್ಷೇಪಿಸಿದರು.
ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಗೃಹಸಚಿವ ಪರಮೇಶ್ವರ್, ಘಟನೆಯನ್ನು ಪರಿಶೀಲಿಸಲಾಗುತ್ತಿದೆ. ದೇಶದ್ರೋಹದ ಘೋಷಣೆಯನ್ನು ಕೂಗಿದ್ದರೆ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಎಫ್‍ಎಸ್‍ಎಲ್ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಅದರ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಉತ್ತರದಿಂದ ತೃಪ್ತರಾಗದ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಆರ್.ಅಶೋಕ್, ಗೃಹಸಚಿವರು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಆದರೆ ನಿನ್ನೆ ಘಟನೆ ನಡೆದಾಗ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ನಾಸಿರ್ ಹುಸೇನ್ ಏಕೆ ಖಂಡನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಈ ಸರ್ಕಾರ ಘಟನೆಯನ್ನು ಹಗುರವಾಗಿ ತೆಗೆದುಕೊಂಡಿದೆ. ಪಾಕಿಸ್ತಾನ ಪರವಾದ ಘೋಷಣೆ ಕೂಗಿದ ಬಳಿಕವೂ ಅದನ್ನು ಸಹಿಸಿಕೊಂಡರೆ ಬದುಕಿದ್ದೂ ವ್ಯರ್ಥ. ಸರ್ಕಾರ ಅಕಾರಕ್ಕೆ ಅಂಟಿಕೊಳ್ಳದೆ ತಕ್ಷಣವೇ ರಾಜೀನಾಮೆ ನೀಡಿ ನಿರ್ಗಮಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗೆ ಇಳಿದು ಧರಣಿ ನಡೆಸಿದರು.ಚರ್ಚೆಯ ಉದ್ದಕ್ಕೂ ವಾದ-ವಿವಾದ, ವಾಗ್ವಾದ, ವಾಕ್ಸಮರಗಳು ಯಥೇಚ್ಛವಾಗಿ ಕಂಡುಬಂದವು.
10.30 ರ ಸುಮಾರಿಗೆ ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದ್ದರು. ನಂತರ 1.15 ರ ಸುಮಾರಿಗೆ ಬಿಜೆಪಿಯವರು ಧರಣಿ ನಡೆಸಿದ್ದರಿಂದಾಗಿ ಮತ್ತೊಮ್ಮೆ ಕಲಾಪವನ್ನು ಮುಂದೂಡಬೇಕಾಯಿತು.