Monday, November 25, 2024
Homeರಾಜಕೀಯ | Politicsಮೈತ್ರಿಗೆ ಜೆಡಿಎಸ್-ಬಿಜೆಪಿಯಲ್ಲಿ ಅಪಸ್ವರ

ಮೈತ್ರಿಗೆ ಜೆಡಿಎಸ್-ಬಿಜೆಪಿಯಲ್ಲಿ ಅಪಸ್ವರ

ಬೆಂಗಳೂರು,ಅ.6-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಸೋಲಿಸಲು ಭಿನ್ನಾಭಿಪ್ರಾಯ ಮರೆತು ಒಗ್ಗೂಡಲು ಮುಂದಾಗಿದ್ದ ಬಿಜೆಪಿ , ಜೆಡಿಎಸ್ ಮೈತ್ರಿಗೆ ಅಪಸ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎರಡು ಪಕ್ಷಗಳ ನಡುವೆ ಕಂದಕ ಇನ್ನಷ್ಟು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಳವಾಗಿದೆ.

ಸೈದ್ಧಾಂತಿಕವಾಗಿ ಉತ್ತರ ಧೃವ ಮತ್ತು ದಕ್ಷಿಣ ಧೃವ ಎಂಬಂತಿದ್ದ ಬಿಜೆಪಿ, ಜೆಡಿಎಸ್ ಮೈತ್ರಿ ಮೇಲ್ನೋಟಕ್ಕೆ ಮೊದಲ ಹಂತದ ನಾಯಕರ ನಡುವೆ ಆಗಿದೆ. ಆದರೆ ಎರಡನೇ ಮತ್ತು ಮೂರನೇ ಹಂತದ ನಾಯಕರು ಈ ಕ್ಷಣಕ್ಕೂ ಮೈತ್ರಿಯನ್ನು ವಿರೋಧಿಸುತ್ತಲೇ ಇದ್ದಾರೆ.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವುದು ಒಂದು ನೆಪಮಾತ್ರ. ಬರುವ ದಿನಗಳಲ್ಲಿ ಈ ಧ್ವನಿಗೆ ಇನ್ನಷ್ಟು ಶಕ್ತಿ ಬರಲಿದ್ದು, ಜೆಡಿಎಸ್ ಜೊತೆ ಹೊಂದಾಣಿಕೆ ಬೇಡವೇ ಬೇಡ ಎಂಬ ಕೂಗು ಹೆಚ್ಚಾಗಲಿದೆ.

ಮಾಜಿ ಶಾಸಕ ಪ್ರೀತಂಗೌಡ ಕೂಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈತ್ರಿಗೆ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಹಾಸನ ಕ್ಷೇತ್ರವನ್ನು ಜೆಡಿಎಸ್‍ನವರು ನಮಗೆ ಬಿಟ್ಟುಕೊಡಲಿ ಎಂದು ಸವಾಲು ಹಾಕಿದ್ದಾರೆ. ಇನ್ನು ಇದೇ ರೀತಿ ಅನೇಕ ಶಾಸಕರು ಒಳಗೊಳಗೇ ಜೆಡಿಎಸ್ ಜೊತೆ ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಬಹಿರಂಗವಾಗಿ ಯಾರೂ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ವಿರೋಧ ವ್ಯಕ್ತವಾದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಕಲ್ಲು ಬೀಳಬಹುದು ಎಂಬ ಆತಂಕ ಕಾಡುತ್ತಿದೆ.

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಬಹುತೇಕ ಬಿಜೆಪಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ವೇಳೆಗೆ ಶಾಸಕ ಸ್ಥಾನಕ್ಕೆ ಇಬ್ಬರು ರಾಜೀನಾಮೆಯನ್ನು ನೀಡಬಹುದು. ಹೀಗಾಗಿಯೇ ಅವರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ಅಲ್ಲದೆ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಂಘಟನೆಯಲ್ಲಿ ಪ್ರಬಲವಾಗಿದ್ದು, ಉಪಚುನಾವಣೆ ಎದುರಾದರೆ ಗೆದ್ದು ಬರುವುದು ಅಷ್ಟು ಸರಳವಾಗಿಲ್ಲ ಎಂಬುದು ಅವರಿಗೂ ಗೊತ್ತಾಗಿದೆ. ಹೀಗಾಗಿಯೇ ಜೆಡಿಎಸ್ ಜೊತೆ ಹೊಂದಾಣಿಕೆಗೆ ವಿರೋಧವನ್ನು ಹೊರಹಾಕಿದ್ದಾರೆ. ಸದ್ಯ ಶಿವರಾಂ ಹೆಬ್ಬಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲವಾದರೂ ಸೋಮಶೇಖರ್ ಅಭಿಪ್ರಾಯಕ್ಕೆ ಅವರ ಸಹಮತ ಇದ್ದೇ ಇರುತ್ತದೆ ಎಂದು ಹೇಳಲಾಗಿದೆ.

ಉಳಿದಂತೆ ಹಳೆ ಮೈಸೂರು ಭಾಗವಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಗೆ ಎರಡು ಮತ್ತು ಮೂರನೇ ಹಂತದ ನಾಯಕರು ಸುತಾರಾಂ ಒಪ್ಪುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಉಂಟಾಗಿರಬಹುದು. ಆದರೆ ಇದೇ ಪರಿಸ್ಥಿತಿ ಲೋಕಸಭೆ ಚುನಾವಣೆಯಲ್ಲಿ ಇರುತ್ತದೆ ಎಂದು ಭಾವಿಸಬೇಕಿಲ್ಲ.

ವಿಧಾನಸಭಾ ಚುನಾವಣೆ ಸ್ಥಳೀಯ ರಾಜಕೀಯ ಪರಿಸ್ಥಿತಿಗನುಗುಣವಾಗಿ ನಡೆಯುತ್ತದೆ. ಇದೇ ಫಲಿತಾಂಶವನ್ನು ಲೋಕಸಭೆ ಚುನಾವಣೆಗೂ ಅನ್ವಯಿಸಿಕೊಳ್ಳಬೇಕಾಗಿಲ್ಲ. ಎರಡು ಚುನಾವಣೆಗಳ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲೇ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಒಂದು ಕಡೆ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ, ಸಂಘಟನೆಯ ಚತುರ ಡಿ.ಕೆ.ಶಿವಕುಮಾರ್‍ರಂತಹ ಘಟಾನುಘಟಿಗಳು ಇದ್ದಾಗಲೇ ನಾವು 25 ಸ್ಥಾನಗಳನ್ನು ಗೆದ್ದಿದ್ದೆವು ಇದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಡದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗಲೂ ಬಿಜೆಪಿ ಕ್ಲೀನ್‍ಸ್ವೀಪ್ ಮಾಡಿತ್ತು.

ಈಗ ಪಂಚಖಾತ್ರಿ ಯೋಜನೆಗಳು ಸರ್ಕಾರದ ಜನಪ್ರಿಯತೆ ಅಂದುಕೊಂಡರೂ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಕನಿಷ್ಠ ಎಂದರೂ 28 ರ ಪೈಕಿ 14 ರಿಂದ 15 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಒಂದಿಷ್ಟು ಶ್ರಮ ಹಾಕಿದರೆ 18 ರಿಂದ 20 ಸ್ಥಾನಗಳು ನಮಗೆ ಲಭಿಸಲಿವೆ.

ಹೈಸ್ಪೀಡ್ ರೈಲು ಸಂಚರಿಸುವ ಸುರಂಗ ಮಾರ್ಗ ಪೂರ್ಣ

1999 ರಿಂದ ಈವರೆಗೂ ರಾಜ್ಯದಲ್ಲಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನಿಚ್ಛಳವಾಗಿ ಮುನ್ನಡೆ ಸಾಧಿಸಿಕೊಂಡು ಬಂದಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ನಮ್ಮ ಪರಿಶ್ರಮದಲ್ಲಿ ಜೆಡಿಎಸ್ ಮೂರರಿಂದ ನಾಲ್ಕು ಸ್ಥಾನಗಳನ್ನು ಗೆದ್ದುಕೊಳ್ಳಬಹುದು. ಬದಲಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಹಿಂದೆ ಸರಿಯುವುದೇ ಲೇಸು ಎನ್ನುವುದು ಬಹುತೇಕ ನಾಯಕರ ಒತ್ತಾಸೆಯಾಗಿದೆ.

ಹಾವು ಮುಂಗಸಿಯಂತಿದ್ದ ನಾವು ಏಕಾಏಕಿ ಪರಸ್ಪರ ಹಸ್ತಲಾಘವ ಮಾಡುವುದು ಅಷ್ಟು ಸುಲಭವಲ್ಲ. ಜೆಡಿಎಸ್‍ನ ಭದ್ರಕೋಟೆ ಎನಿಸಿದ ಹಾಸನದಲ್ಲೇ ಎರಡು ಸ್ಥಾನಗಳನ್ನು ಗೆದ್ದಿದ್ದೇವೆ. ಅಲ್ಲದೆ ಸ್ವತಃ ಹಾಸನ ಕ್ಷೇತ್ರದಲ್ಲೇ ನಮ್ಮ ಸಂಘಟನೆ ಈಗಲೂ ಪ್ರಬಲವಾಗಿದೆ. ಈ ಬಾರಿ ಬಿಜೆಪಿ ಗೆಲ್ಲುವ ವಾತಾವರಣವಿದ್ದು, ನಾವೇಕೆ ಜೆಡಿಎಸ್‍ಗೆ ಬಿಟ್ಟುಕೊಡಬೇಕೆಂದು ಪ್ರೀತಂಗೌಡ ರಾಜ್ಯನಾಯಕರಿಗೆ ಒತ್ತಡ ಹಾಕಿದ್ದಾರೆ.

ಹೀಗೆ ಎಲ್ಲಾ ಹಂತದಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ಬಿಜೆಪಿಗೆ ಮತ್ತೊಂದು ತಲೆನೋವು ಎದುರಾಗಿದೆ.

RELATED ARTICLES

Latest News