ಬೆಂಗಳೂರು,ಮಾ.1- ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್‍ರಾಜ್ ನೇತೃತ್ವದಲ್ಲಿ ಮುಖಂಡರಾದ ಸಾಯಿಶಂಕರ್, ಬಾಬಣ್ಣ, ಡಾ.ಶೋಭಾ , ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್ ಸಮ್ಮುಖದಲ್ಲಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ನ್ಯಾಯಯುತ ಬೇಡಿಕೆಗಳ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸಚಿವಾಲಯ ನೌಕರರ ಸಂಘ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ನೌಕರರ ಸಂಘ, ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ, ಮತ್ತು ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ನೌಕರರ ಸಂಘ, ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘ, ಕಲಬುರಗಿ ಮಹಾನಗರ ಪಾಲಿಕೆ ಅಕಾರಿಗಳ ಹಾಗೂ ನೌಕರರ ಸಂಘ, ತುಮಕೂರು ಮಹಾನಗರ ಪಾಲಿಕೆ ಅಕಾರಿಗಳ ಮತ್ತು ನೌಕರರ ಸಂಘ, ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ದಿ ಸಂಘ, ದಾವಣಗೆರೆ ಮಹಾನಗರಪಾಲಿಕೆ ನೌಕರರ ಸಂಘ, ಮಂಗಳೂರಿನ ಎಸ್.ಕೆ.ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ಬೆಂಬಲ ಘೋಷಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.
ಕಂದಾಯ ಇಲಾಖೆ ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹ ಹೆಚ್ಚಳವಾದರು ಅಧಿಕಾರಿ, ನೌಕರರ ಮೇಲೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಮಾತ್ರವಲ್ಲ ಕುಂಟು ನೆಪ ಹೇಳಿಕೊಂಡು ಅಮಾನತು ಮಾಡಲಾಗುತ್ತಿದೆ. 2022-23ನೇ ಸಾಲಿನಲ್ಲ 3339ಕೋಟಿ ಮತ್ತು 2023-24ರ ಸಾಲಿನಲ್ಲಿ 3598ಕೋಟಿ ತೆರಿಗೆ ಸಂಗ್ರಹ ಮಾಡಿದ್ದರೂ ಅಧಿಕಾರಿಗಳಿಗೆ ಕಿರುಕುಳ ಮಾತ್ರ ತಪ್ಪಿಲ್ಲ ಎಂದು ಸಂಘದ ಅಧ್ಯಕ್ಷ ಅಮೃತ್‍ರಾಜ್ ಆರೋಪಿಸಿದರು.
ಸಹಾಯಕ ಕಂದಾಯ ಅಧಿಕಾರಿ ಲಕ್ಷ್ಮಿರವರ ವಿರುದ್ದ 5ವರ್ಷದಿಂದ ಇಲಾಖೆ ವಿಚಾರಣೆ ಅಂತಿಮ ಆದೇಶ ನೀಡದೇ ಅಮಾನತು ಮಾಡಿರುವುದು. ಆರ್.ಆರ್ ನಗರ ವಲಯದಲ್ಲಿ ಆರೋಗ್ಯಧಿಕಾರಿ ದೇವಿಕಾರಾಣಿರವರಿಗೆ ಸ್ಥಳ ನಿಯೋಜನೆ ಮಾಡದೇ ಇರುವುದು. ಅಂಗ್ಲ ಭಾಷೆ ಫಲಕಕ್ಕೆ ಅನಾಮಧೇಯರು ಕಲ್ಲು ತೂರಿ ಹಾನಿ ಮಾಡಿದ ಪ್ರಕರಣದಲ್ಲಿ ವಿನಾಕಾರಣದಿಂದ ಹಿರಿಯ ಆರೋಗ್ಯ ಪರಿವಿಕ್ಷಕ ಕೆ.ಎಲ.ವಿಶ್ವನಾಥ್ ರವರನ್ನು ಅಮಾನತು ಮಾಡಿರುವುದು ನ್ಯಾಯಸಮ್ಮತವಲ್ಲ ಎಂದು ಅವರು ದೂರಿದರು.
ಪಾಲಿಕೆ ಅಧಿಕಾರಿ ಮತ್ತು ನೌಕರರ ಕಛೇರಿ ಹೊರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಹೆಚ್ಚು ಅದ್ದರಿಂದ ಬಯೋಮೆಟ್ರಿಕ್ ಮೂಲಕ ಬೆಳಗ್ಗೆ 10ಗಂಟೆಗೆ ಲಾಗ್ ಇನ್ ಮತ್ತು ಸಂಜೆ 5-30ಲಾಗ್ ಆಫ್ ನಿಬಂಧನೆಗಳನ್ನು ತೆರವುಗೊಳಿಸಬೇಕು . ಬಿಬಿಎಂಪಿ ಕಿರಿಯ ಅಭಿಯಂತರುಗಳ 108ಹುದ್ದೆಗಳ ನೇಮಕಾತಿ ಮತ್ತು ಮುಂಬಡ್ತಿಗಾಗಿ ಅೀಧಿಕ್ಷಕ ಅಭಿಯಂತರರ ಹುದ್ದೆ 10, ಕಾರ್ಯಪಾಲಕ ಅಭಿಯಂತರ ಹುದ್ದೆ 20ಹಾಗೂ ಇಂಜನಿಯರ್ ವಿಭಾಗಕ್ಕೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡಲೆ ಕಳುಹಿಸಬೇಕು.
ಬಿಬಿಎಂಪಿ ಎ.ಶ್ರೇಣಿಯ ಅಧಿಕಾರಿಗಳ ಮುಂಬಡ್ತಿ ಪಡೆಯಲು ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ ಸರ್ಕಾರದ ಹಂತದಲ್ಲಿ ವಿಳಂಬವಾಗುತ್ತಿರುವುದರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎ.ಶ್ರೇಣಿ ಅಧಿಕಾರಗಳಿಗೆ ಮುಂಬಡ್ತಿ ಅಧಿಕಾರ ವರ್ಗಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
198ವಾರ್ಡ್ ಆಗಿದ್ದ ಬಿಬಿಎಂಪಿ 225ವಾರ್ಡ್ ಆಗಿ ಪರಿವರ್ತನೆಗೊಂಡಿರುವುದರಿಂದ ಅಗತ್ಯ ಅಧಿಕಾರಿ, ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಬೇಕು. ಬಿಬಿಎಂಪಿಯಲ್ಲಿ ಖಾಲಿ ಇರುವ 5219ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಮಂಜೂರಾತಿ ನೀಡಬೇಕು. ಕಳೆದ ನಾಲ್ಕು ವರ್ಷಗಳಿಂದ ನಡೆಯದಿರುವ ನಾಡಪ್ರಭು ಕೆಂಪೇಗೌಡ ದಿನಾಚರಣೆ ಅಚರಣೆ ಮಾಡಬೇಕು. ಬೆಂಗಳೂರುನಗರ 1ಕೋಟಿ 30ಲಕ್ಷ ಜನಸಂಖ್ಯೆ ಇದೆ. ಇದರ ಅನುಗುಣವಾಗಿ ಅಕಾರಿ, ಸಿಬ್ಬಂದಿಗಳು ಸಂಖ್ಯೆ ಇದ್ದೆಗ ಸುಲಭ ಕಾರ್ಯನಿರ್ವಹಣೆ ಸಹಕಾರಿಯಾಗಲಿರುವುದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ಅವರು ಈ ಕೊಡಲೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಘದ ಪದಾಧಿಕಾರಿಗಳು ಸೋಮಶೇಖರ್, ಕೆ.ನರಸಿಂಹ, ಹೆಚ್.ಕೆ.ತಿಪ್ಪೇಶ್, ರೇಣುಕಾಂಬ, ಕೆ.ಮಂಜೇಗೌಡ, ಎಸï.ಜಿ.ಸುರೇಶ್, ಮಂಜುನಾಥ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ್, ಸಂತೋಷ್ ಕುಮಾರ್,ಹೆಚ್.ಬಿ.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.