Sunday, May 19, 2024
Homeರಾಜ್ಯಎಫ್‍ಎಸ್‍ಎಲ್ ವರದಿ ಸರ್ಕಾರದ ಕೈ ಸೇರಿಲ್ಲ : ಜಿ.ಪರಮೇಶ್ವರ್

ಎಫ್‍ಎಸ್‍ಎಲ್ ವರದಿ ಸರ್ಕಾರದ ಕೈ ಸೇರಿಲ್ಲ : ಜಿ.ಪರಮೇಶ್ವರ್

ಬೆಂಗಳೂರು,ಮಾ.1- ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೂ ಎಫ್‍ಎಸ್‍ಎಲ್ ವರದಿ ಸರ್ಕಾರದ ಕೈ ಸೇರಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ವರದಿ ಬರುವುದು ಬಾಕಿ ಇದೆ. ಒಂದು ಚಾನೆಲ್‍ನಲ್ಲಿ ಪ್ರಸಾರವಾದ ದೃಶ್ಯ ಅಥವಾ ಒಂದು ಕ್ಲಿಪ್ಪಿಂಗ್‍ಗೆ ಸಂಬಂಧಿಸಿದಂತೆ ತನಿಖೆ ಸೀಮಿತವಾಗುವುದಿಲ್ಲ. ಇರುವ ಎಲ್ಲಾ ದೃಶ್ಯಗಳನ್ನೂ ಪಡೆದುಕೊಂಡು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದೇವೆ. ಆದಷ್ಟು ಬೇಗ ವರದಿ ನೀಡುವಂತೆ ಪ್ರಯೋಗಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಅದರ ಪ್ರಕಾರ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಈಗಾಗಲೇ 7 ಜನರನ್ನು ಕರೆಸಿ, ಹೇಳಿಕೆ ಪಡೆದು, ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದೇವೆ. ಪ್ರಯೋಗಾಲಯದ ವರದಿ ಬಂದ ಬಳಿಕ ಧ್ವನಿ ಮಾದರಿಗಳನ್ನು ಹೋಲಿಕೆ ಮಾಡಲಾಗುತ್ತದೆ. ಶಂಕೆ ಇರುವವರ ಧ್ವನಿ ಮಾದರಿಗಳನ್ನೂ ಸಂಗ್ರಹಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಂಪುಟ ಸಭೆಯಲ್ಲಿ ತೀರ್ಮಾನ :
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿಗೆ ಸಂಬಂಧಿಸಿದಂತೆ ಸಂಪುಟ ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ನಿನ್ನೆಯ ಸಭೆಯಲ್ಲಿ ತಿಳಿಸಿದ್ದಾರೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಿನ್ನೆ ವರದಿ ನೀಡಿದೆ. ಅದರ ಕುರಿತು ನಿನ್ನೆ ಸಂಪುಟದಲ್ಲಿ ಔಪಚಾರಿಕ ಚರ್ಚೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ವರದಿಯ ಕುರಿತು ಸವಿಸ್ತಾರವಾದ ಚರ್ಚೆ ನಡೆಸಲಾಗುವುದು.

ವರದಿಯನ್ನು ಉಭಯ ಸದನಗಳಲ್ಲಿ ಮಂಡಿಸಬೇಕೇ ಅಥವಾ ಸರ್ಕಾರವೇ ನೇರವಾಗಿಯೇ ವರದಿಯನ್ನು ಬಹಿರಂಗ ಪಡಿಸಬೇಕೇ ಎಂಬುದನ್ನು ಸಂಪುಟ ನಿರ್ಧರಿಸಬೇಕಾಗುತ್ತದೆ. ಎಲ್ಲಾ ಸಚಿವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ದತ್ತಾಂಶ ಹಾಗೂ ಶಿಫಾರಸುಗಳು ಅಧಿಕೃತವಾಗಿ ಹೊರಗೆ ಬರುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಏನೇ ಚರ್ಚೆಗಳಾದರೂ ಅದು ವದಂತಿ ಮಾತ್ರ. ಆ ಜಾತಿ ಜನಸಂಖ್ಯೆ ಜಾಸ್ತಿ ಇದೆ, ಈ ಜಾತಿ ಜನಸಂಖ್ಯೆ ಜಾಸ್ತಿ ಇದೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ವರದಿ ತೆರೆದು ನೋಡಿದ ಬಳಿಕವಷ್ಟೇ ಸತ್ಯಾಂಶ ಗೊತ್ತಾಗಲಿದೆ ಎಂದರು.

ಕಾಂಗ್ರೆಸ್‍ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರಿಗೆ ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಇದೆ ಎಂಬ ಆತಂಕ ಇರುವಂತಿದೆ. ಒಂದು ವೇಳೆ ಜನಸಂಖ್ಯೆ ಕಡಿಮೆ ಎಂದಾದರೆ ರಾಜಕೀಯವಾಗಿ ತೊಂದರೆಯಾಗಬಹುದು ಎಂಬ ಅನುಮಾನಗಳೂ ಇವೆ. ಆದರೆ ವರದಿ ಬಹಿರಂಗಗೊಂಡ ನಂತರ ಅದಕ್ಕೆ ಅಕೃತ ಉತ್ತರ ದೊರೆಯಲಿದೆ. ಆವರೆಗೂ ನನ್ನನ್ನೂ ಸೇರಿದಂತೆ ಹಲವರು ವದಂತಿಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ ಎಂದು ತಿಳಿಸಿದರು.

ನಿನ್ನೆ ಸರ್ಕಾರ ಸ್ವೀಕರಿಸಿರುವ ವರದಿ ಕಾಂತರಾಜು ಅಥವಾ ಜಯಪ್ರಕಾಶ್ ಹೆಗ್ಡೆ ಅವರ ವರದಿಯೆಂದಾಗುವುದಿಲ್ಲ. ಅದು ಹಿಂದುಳಿದ ವರ್ಗಗಳ ಆಯೋಗದ ವರದಿ ಮಾತ್ರ ಎಂದು ಸ್ಪಷ್ಟಪಡಿಸಿದರು.ನಿನ್ನೆ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರ ಅಂತ್ಯಕ್ರಿಯೆಗೆ ಛಲವಾದಿ ಮಹಾಸಭಾದ ಜಾಗದಲ್ಲಿ ಸ್ಥಳಾವಕಾಶ ನೀಡಬೇಕು ಎಂಬ ಬೇಡಿಕೆಯಿದೆ. ನಾನೂ ಈ ಕುರಿತು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿದ್ದೇನೆ. ಇಂದು ಬೆಳಿಗ್ಗೆ ಮುಖ್ಯಮಂತ್ರಿಯವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

RELATED ARTICLES

Latest News