ಬೆಂಗಳೂರು,ಮಾ.1- ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ವಿರೋಧಿಸಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಗಾ.ನಂ.ಶ್ರೀಕಂಠಯ್ಯ, ನಮ್ಮ ಸಮಾಜದ ಮಠಾೀಧಿಶರು, ಸಚಿವರು, ಶಾಸಕರು, ಸಂಸದರು, ಸಮಾಜದ ಹಿರಿಯರು ಸಭೆ ಸೇರಿ ಚರ್ಚಿಸಿ ಮುಂದಿನ ಹೋರಾಟದ ರೂಪು ರೇಷೆಗಳನ್ನ ನಿರ್ಧರಿಸಲಾಗುವುದು ಎಂದು ಹೇಳಿದರು.
ಸಂಪೂರ್ಣ ವರದಿಯನ್ನು ಪಡೆದು ಕಾಂತರಾಜು ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮನೆಮನೆ ಸರ್ವೆ ಮಾಡಿ ಮಾಹಿತಿ ಪಡೆದಿಲ್ಲ ಎಂಬ ಆರೋಪವಿದ್ದು, ಆ ವರದಿ ಸ್ವೀಕರಿಸಿದಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದರು. ನಮ್ಮ ಸಮಾಜದ ಮಠಾೀಧಿಶರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪಮುಖ್ಯಮಂತ್ರಿಗಳು, ಸಂಸದರು, ಸಚಿವರು, ಶಾಸಕರು ಹಾಗೂ ಸಮಾಜದ ಹಿರಿಯರು ಸಹಿ ಮಾಡಿದ್ದ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅವೈಜ್ಞಾನಿಕ ವರದಿ ಸ್ವೀಕರಿಸದಂತೆ ಕೋರಲಾಗಿತ್ತು ಎಂದು ಅವರು ಹೇಳಿದರು.
ಕಳೆದ 2014-15 ನೇ ಸಾಲಿನಲ್ಲಿ ಸಂಗ್ರಹಿಸಲಾದ ದತ್ತಾಂಶದ ಮಾಹಿತಿ ವರದಿಯಲ್ಲಿದೆ ಎಂದು ತಿಳಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ ಪ್ರಕಾರ ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಬೇಕಾಗಿದೆ. ಈ ವರದಿಗೆ ದತ್ತಾಂಶ ಸಂಗ್ರಹಿಸಿ ಸುಮಾರು 10 ವರ್ಷವಾಗಿರುವುದರಿಂದ ವರದಿಯನ್ನು ತಿರಸ್ಕರಿಸುವಂತೆ ಮನವಿ ಮಾಡಲಾಗಿತ್ತು ಎಂದು ಅವರು ತಿಳಿಸಿದರು.
ಒಕ್ಕಲಿಗ ಸಮಾಜದ ಎಲ್ಲಾ ಉಪಪಂಗಡಗಳನ್ನು ಒಟ್ಟಿಗೆ ಸೇರಿಸಿ ವರದಿ ನೀಡಬೇಕೆಂದು ಮಾಡಿದ್ದ ಮನವಿಯನ್ನು ಆಯೋಗ ಪರಿಗಣಿಸಿಲ್ಲ. ಜಾತಿ ಜನಗತಣತಿಯನ್ನು ಮಾಡಲಾಗಿದೆ ಎನ್ನಲಾಗಿದೆ ಎಂದರು. ರಾಜ್ಯದ ಜನಸಂಖ್ಯೆ 7 ಕೋಟಿ 20 ಲಕ್ಷವಿದ್ದು, ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ 5 ಕೋಟಿ 98 ಲಕ್ಷ ಮಾತ್ರ ಇತ್ತು. ಉಳಿದ 1 ಕೋಟಿ 22 ಲಕ್ಷ ಜನಸಂಖ್ಯೆಯ ಸಮೀಕ್ಷೆ ಮಾಡಿಲ್ಲ ಎಂದು ಅವರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ, ಸಂಚಾಲಕರಾದ ಟಿ.ವೆಂಕಟೇಶ್, ಶಿವಲಿಂಗೇಗೌಡ, ರಾಮಚಂದ್ರ ಕೆ.ಆರ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಾಮಾಜಿಕ, ಶೈಕ್ಷಣಿಕ ವರದಿ ಬಹಿರಂಗಗೊಳಿಸದಿರಲು ಒಕ್ಕಲಿಗರ ಸಂಘ ಆಗ್ರಹ
ಬೆಂಗಳೂರು,ಮಾ.1- ಅವೈಜ್ಞಾನಿಕವಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ರಾಜ್ಯ ಸರ್ಕಾರ ಬಹಿರಂಗಗೊಳಿಸಿ ಅನುಷ್ಠಾನಕ್ಕೆ ಮುಂದಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ತಿಳಿಸಿದರು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ 2015ರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ನಿನ್ನೆ ಸಲ್ಲಿಕೆಯಾಗಿದೆ. ಆ ವರದಿಯನ್ನು ಸ್ವೀಕಾರ ಮಾಡಿರುವುದು ಸರಿಯಲ್ಲ. ಆ ವರದಿಯನ್ನು ಬಹಿರಂಗಗೊಳಿಸುವುದು ಹಾಗೂ ಅನುಷ್ಠಾನಗೊಳಿಸಲು ಸರ್ಕಾರ ಮುಂದಾದರೆ ಕಾನೂನು ಪ್ರಕಾರ ಹೋರಾಟಕ್ಕೂ ಮುಂದಾಗುತ್ತೇವೆ ಎಂದರು.
ಅವೈಜ್ಞಾನಿಕವಾಗಿದೆ ಎಂಬ ಆರೋಪಕ್ಕೆ ಒಳಗಾಗಿರುವ ಸಮೀಕ್ಷಾ ವರದಿಯ ಬಗ್ಗೆ ಸಂಘ ತೀವ್ರ ವಿರೋಧ ವ್ಯಕ್ತಪಡಿಸಲಿದೆ. ಒಂದು ವೇಳೆ ಅನುಷ್ಠಾನಕ್ಕೆ ಮುಂದಾದರೆ ನಮ್ಮ ಸಮುದಾಯದ ಮಠಾೀಧಿಶರು, ಉಪಮುಖಮಂತ್ರಿಗಳು, ಸಚಿವರು, ವಿವಿಧ ಸಂಘಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧಾರ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಅವಧಿಯಲ್ಲಿ ಸಿದ್ದಪಡಿಸಲಾದ ಸಾಮಾಜಿಕ, ಶೈಕ್ಷಣಿಕ ವರದಿಯು ಅವೈಜ್ಞಾನಿಕವಾಗಿದೆ ಎಂಬ ಆರೋಪವಿತ್ತು. ಅಲ್ಲದೆ 8 ವರ್ಷಗಳಷ್ಟು ಹಳೆಯ ದತ್ತಾಂಶಗಳನ್ನು ಒಳಗೊಂಡಿದೆ. ಹೀಗಾಗಿ ಆ ವರದಿಯನ್ನು ಸ್ವೀಕರಿಸಬಾರದು ಮತ್ತು ಅನುಷ್ಠಾನಕ್ಕೆ ತರಬಾರದು ಎಂದು ಸಂಘ ಆಗ್ರಹಿಸಿತ್ತು. ಆದರೂ ಮುಖ್ಯಮಂತ್ರಿಯವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆ ಅವರಿಂದ ವರದಿ ಸ್ವೀಕಾರ ಮಾಡಿದ್ದಾರೆ.
ಒಂದು ವೇಳೆ ಸಮೀಕ್ಷಾ ವರದಿ ಅಗತ್ಯವಿದ್ದರೆ ಹೊಸದಾಗಿ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಬೇಕೆಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಆದರೂ ಅವೈಜ್ಞಾನಿಕವಾಗಿದೆ ಎಂಬ ಆರೋಪ ಇರುವ ವರದಿಯನ್ನು ಸ್ವೀಕರಿಸಲಾಗಿದೆ. ಸರ್ಕಾರ ಮುಂದೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡಿ ಸಂಘ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.