Saturday, April 27, 2024
Homeರಾಜ್ಯಜಾತಿ ಜ್ವಾಲೆ : ಸರ್ಕಾರಕ್ಕೆ ಶ್ಯಾಮನೂರು ಶಿವಶಂಕರಪ್ಪ ಗಂಭೀರ ಎಚ್ಚರಿಕೆ

ಜಾತಿ ಜ್ವಾಲೆ : ಸರ್ಕಾರಕ್ಕೆ ಶ್ಯಾಮನೂರು ಶಿವಶಂಕರಪ್ಪ ಗಂಭೀರ ಎಚ್ಚರಿಕೆ

ಬೆಂಗಳೂರು,ಮಾ.1- ಒಂಬತ್ತು ವರ್ಷಗಳಷ್ಟು ಹಳೆಯದಾದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಒಂದು ವೇಳೆ ಸರ್ಕಾರ ಅದನ್ನು ಅಂಗೀಕರಿಸಲು ಮುಂದಾದರೆ ನಾವು ಸುಮ್ಮನೇ ಕೂರುವುದಿಲ್ಲ. ಏನು ಮಾಡಬೇಕು ಎಂಬ ನಿರ್ಧಾರ ಮಾಡುತ್ತೇವೆ ಎಂದು ಆಡಳಿತ ಪಕ್ಷವಾಗಿರುವ ಕಾಂಗ್ರೆಸ್‍ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ದಿಢೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ನಿನ್ನೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಲಿಂಗಾಯತ-ವೀರಶೈವ, ಒಕ್ಕಲಿಗರು, ಬ್ರಾಹ್ಮಣರು ಸೇರಿ 1.82 ಲಕ್ಷ ಜನಸಂಖ್ಯೆ ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಉಳಿದವರು 3 ಕೋಟಿ ಇದ್ದಾರೆ ಎಂಬ ಮಾಹಿತಿ ಇದೆ. ಆದರೆ ಲಿಂಗಾಯತ-ವೀರಶೈವ ಸಮುದಾಯದ ಉಪಜಾತಿಗಳನ್ನು ಒಳಗೊಂಡು ಒಟ್ಟು ಜನಸಂಖ್ಯೆ 2 ಕೋಟಿಗೂ ಹೆಚ್ಚಿದೆ ಎಂದು ಹೇಳಿದರು.

ಒಂಬತ್ತು ವರ್ಷಗಳಷ್ಟು ಹಳೆಯದಾದ ವರದಿಯನ್ನು ಈಗ ತಂದಿದ್ದಾರೆ. ಸಮೀಕ್ಷೆ ಮಾಡಿದ್ದು ಕಾಂತರಾಜು, ಸರ್ಕಾರಕ್ಕೆ ವರದಿ ನೀಡಿರುವುದು ಹೆಗ್ಡೆಯವರು. ಇದು ಯಾರ ವರದಿ? ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿರುವ ಅಭಿಪ್ರಾಯ ಸರಿಯಾಗಿದೆ ಎಂದು ಶ್ಯಾಮನೂರು ಶಿವಶಂಕರಪ್ಪ ಬೆಂಬಲ ವ್ಯಕ್ತಪಡಿಸಿದರು.

ನಮ್ಮ ಸಮುದಾಯದ ಜನಸಂಖ್ಯೆ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿ ಅವೈಜ್ಞಾನಿಕ ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಒಂದು ವೇಳೆ ಸರ್ಕಾರ ನಮ್ಮ ಮಾತನ್ನು ಪರಿಗಣಿಸದೇ ಇದ್ದರೆ ನಾವು ಸುಮ್ಮನೇ ಕೂರುವುದಿಲ್ಲ. ಅಗತ್ಯ ಕ್ರಮ ಕೈಗೊಂಡು ವರದಿ ಅವೈಜ್ಞಾನಿಕ ಎಂಬುದನ್ನು ಸಾಬೀತುಪಡಿಸುತ್ತೇವೆ ಎಂದು ಸವಾಲು ಹಾಕಿದರು. ಸಮುದಾಯದಿಂದ ಖಾಸಗಿಯಾಗಿ ಸಮೀಕ್ಷೆ ನಡೆಸಬೇಕೆಂಬ ಚಿಂತನೆ ಇದೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ವೈಜ್ಞಾನಿಕವಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸುವುದಾದರೆ ಒಪ್ಪಿಕೊಳ್ಳುತ್ತೇವೆ ಎಂದರು.

ವರದಿಯನ್ನು ಸ್ವೀಕರಿಸಿರುವುದು ತಪ್ಪು ಎಂದು ನಾನು ಹೇಳುವುದಿಲ್ಲ. ಅದನ್ನು ಸಂಪುಟದಲ್ಲೂ ಚರ್ಚಿಸಬೇಕಾಗುತ್ತದೆ. ಆದರೆ ಅನುಷ್ಠಾನಕ್ಕೆ ಮುಂದಾದರೆ ವಿರೋಧ ವ್ಯಕ್ತಪಡಿಸುತ್ತೇನೆ. ದಲಿತರ ಸಂಖ್ಯೆ ಹೆಚ್ಚಿದೆ ಎಂದು ವರದಿಯಲ್ಲಿ ನಮೂದಿಸಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ನಮ್ಮ ಸಮುದಾಯ ಕಡಿಮೆ ಇದೆ ಎಂದು ಹೇಳುತ್ತಿರುವುದನ್ನು ಒಪ್ಪುವುದಿಲ್ಲ. ಅವರು ಹೇಳುತ್ತಿರುವುದಕ್ಕಿಂತಲೂ ನಮ್ಮ ಸಂಖ್ಯೆ ದ್ವಿಗುಣವಾಗಿದೆ. ಸಮೀಕ್ಷೆಯ ಪುನರ್ ಪರಿಶೀಲನಾ ಸಮಿತಿ ರಚಿಸುವಂತೆಯೂ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಿಲ್ಲ ಎಂದು ಒಂದು ಹಂತದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಶ್ಯಾಮನೂರು ಶಿವಶಂಕರಪ್ಪ, ವರದಿಯ ವಿರುದ್ಧ ಪ್ರತಿಭಟನೆ ನಡೆಸುತ್ತೀರಾ ಎಂಬ ಪ್ರಶ್ನೆಗೆ, ಯಾಕೆ ಜೈಲಿಗೆ ಹೋಗಬೇಕಾ ಎಂದು ಮರು ಪ್ರಶ್ನಿಸಿದರು. ಈ ಹಿಂದೆ ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮದ ವಿಚಾರವಾಗಿ ವಿವಾದಕ್ಕೀಡಾಗಿ ಕಾಂಗ್ರೆಸ್ ಪೆಟ್ಟು ತಿಂದಿದೆ. ಈಗ ಜಾತಿ ಸಮೀಕ್ಷಾ ವರದಿಯಿಂದ ಮತ್ತಷ್ಟು ಸಮಸ್ಯೆ ಎದುರಿಸಲಿದೆಯೇ ಎಂಬ ಪ್ರಶ್ನೆಗೆ, ನಕ್ಕು ಮೌನಕ್ಕೆ ಶರಣಾದರು. ಪದೇಪದೇ ಪ್ರಶ್ನೆಗಳು ಎದುರಾದಾಗ ಸದ್ಯಕ್ಕೆ ನಾನು ಈ ಪ್ರಶ್ನೆಗೆ ಉತ್ತರ ಹೇಳುವುದಿಲ್ಲ ಎಂದು ಜಾರಿಕೊಂಡರು.

ಆಯೋಗದ ವರದಿಯನ್ನು ಬಹಿರಂಗಗೊಳಿಸುವ ಮೂಲಕ ಜಾತಿ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಜಾತಿಜಾತಿಗಳನ್ನು ಛೂ ಬಿಡುತ್ತಾರೆ ಎಂದು ಶ್ಯಾಮನೂರು ಶಿವಶಂಕರಪ್ಪ ತಮ್ಮದೇ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಉದ್ದೇಶಪೂರ್ವಕವಾಗಿಯೇ ಜಾತಿ ಜನಗಣತಿಯ ವರದಿಯನ್ನು ಕೆಣಕಲಾಗಿದೆ ಎಂದು ಆಕ್ಷೇಪಿಸಿದರು. ದಾವಣಗೆರೆ ಲೋಕಸಭಾ ಚುನಾವಣೆಗೆ ಯಾರನ್ನು ಕಣಕ್ಕಿಳಿಸಬೇಕು ಎಂಬುದು ನಿಮ್ಮ ಅಭಿಪ್ರಾಯ ಎಂದಾಗ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ ಅವರನ್ನು ಕೇಳಿ ಎಂದು ತಮ್ಮ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್‍ರತ್ತ ಬೊಟ್ಟು ಮಾಡಿದರು.

RELATED ARTICLES

Latest News