Friday, December 13, 2024
Homeರಾಜ್ಯಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ವಿತರಣೆ

ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ವಿತರಣೆ

ಬೆಂಗಳೂರು,ಮಾ.1- ಅಂಗಾಂಗ ದಾನ ಮಾಡಿದ ಕುಟುಂಬದವರಿಗೆ ತೊಂದರೆಯಾದರೆ ಸರ್ಕಾರ ಅವರ ಬಗ್ಗೆ ಕಾಳಜಿ ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಅಂಗಾಂಗ ದಾನಿಗಳ ಕುಟುಂಬದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಕುಟುಂಬದ ಸದಸ್ಯರು ಕೈಗೊಂಡ ನಿರ್ಧಾರ ಸುಲಭವಲ್ಲ. ಆದರೆ ಇತರರ ಜೀವ ಉಳಿಸುವ ಕೆಲಸ ನೀವು ಮಾಡಿದ್ದೀರಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ನಿಮಗೆ ಯಾವುದೇ ಸಂಕಷ್ಟ ಎದುರಾದರೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸ್ಥೈರ್ಯ ತುಂಬಿದರು.

ತಮ್ಮ ಹಿಂದಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಯವರು ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಅಪಘಾತಕ್ಕೀಡಾದ ಶರವಣ ಅವರ ಪತ್ನಿ ಪ್ರಶಂಸಾ ಪತ್ರ ಸ್ವೀಕರಿಸುವಾಗ ಅಗಲಿದ ತಮ್ಮ ಪತಿಯನ್ನು ನೆನೆದು ಕಣ್ಣೀರಿಟ್ಟರು. ಕೊಲೆಗೀಡಾದ ರಾಮನಗರದ ಕೆ.ಜಿ. ನವೀನ್ ಕುಟುಂಬದವರಿಗೆ ಅವರ ಸಾವಿಗೆ ನ್ಯಾಯ ಒದಗಿಸುವುದಾಗಿ ಮುಖ್ಯಮಂತ್ರಿಗಳು ಇದೇ ವೇಳೆ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಅಂಗಾಂಗ ದಾನಕ್ಕಾಗಿ ಫೆ.27 ರವರೆಗೂ 8,374 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಮೂತ್ರಪಿಂಡಕ್ಕಾಗಿ ಹೆಚ್ಚು ಬೇಡಿಕೆಯಿದ್ದು, 5,942 ಮಂದಿ ಮನವಿ ಮಾಡಿದ್ದಾರೆ. ಯಕೃತ್‍ಗಾಗಿ 2043, ಹೃದಯಕ್ಕಾಗಿ 187, ಶ್ವಾಸಕೋಶಕ್ಕಾಗಿ 79, ಹೃದಯ ಮತ್ತು ಶ್ವಾಸಕೋಶಕ್ಕಾಗಿ 30, ಯಕೃತ್ ಮತ್ತು ಮೂತ್ರಪಿಂಡಕ್ಕೆ 61, ಮೂತ್ರಪಿಂಡ ಮತ್ತು ಮೇದೊಜೀರಕ ಗ್ರಂಥಿಗಾಗಿ 29, ಹೃದಯ ಮತ್ತು ಮೂತ್ರಪಿಂಡಕ್ಕಾಗಿ 2, ಸಣ್ಣ ಕರುಳಿಗಾಗಿ ಒಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಒಬ್ಬ ಅಂಗಾಂಗ ದಾನಿಯಿಂದ ಹೃದಯ, 2 ಮೂತ್ರಪಿಂಡಗಳು, ಪಿತ್ತಜನಕಾಂಗ ಸೇರಿ ಬಹು ಅಂಗಾಂಗಗಳಿಂದ 8 ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು. ರಾಜ್ಯದಲ್ಲಿ ಕಳೆದ ವರ್ಷ 278 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ದೇಶದಲ್ಲೇ ನಾವು 2 ನೇ ಸ್ಥಾನದಲ್ಲಿದ್ದೇವೆ. ಪ್ರಸಕ್ತ ವರ್ಷ 21 ಜನರಿಂದ ಅಂಗಾಂಗ ದಾನ ಪಡೆಯಲಾಗಿದೆ. ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆಯಲ್ಲಿ 11,527 ಮಹಿಳೆಯರೂ ಸೇರಿ 20,029 ಮಂದಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ 7 ಕುಟುಂಬಗಳ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಹಾಗೂ ಆಯುಕ್ತ ಡಿ.ರಂದೀಪ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News