Wednesday, May 8, 2024
Homeರಾಜ್ಯ28 ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ-ಜೆಡಿಎಸ್‍ನಿಂದ ಚಿಹ್ನೆ ವಿನಿಮಯ ತಂತ್ರ

28 ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ-ಜೆಡಿಎಸ್‍ನಿಂದ ಚಿಹ್ನೆ ವಿನಿಮಯ ತಂತ್ರ

ಬೆಂಗಳೂರು,ಮಾ.1- ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳನ್ನೂ ಶತಾಯಗತಾಯ ಗೆಲ್ಲಲೇಬೇಕು ಎಂದು ಬಿಜೆಪಿ-ಜೆಡಿಎಸ್ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಹೊಸ ರಣತಂತ್ರ ಹೆಣೆಯುತ್ತಿರುವ ಮೈತ್ರಿ ನಾಯಕರು ಚಿಹ್ನೆ ವಿನಿಮಯ ಎಂಬ ಹೊಸ ಸೂತ್ರದ ಮೊರೆ ಹೋಗುತ್ತಿದ್ದಾರೆ. ಅಂದರೆ, ಒಂದು ಪಕ್ಷದ ಅಭ್ಯರ್ಥಿಯನ್ನು ಮತ್ತೊಂದು ಪಕ್ಷದ ಚಿಹ್ನೆಯಡಿ ಕಣಕ್ಕೆ ಇಳಿಸಲು ವರಿಷ್ಠರು ಮುಂದಾಗಿದ್ದಾರೆ.

ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರ ಅಳಿಯ, ಜಯದೇವ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರನ್ನು ಬೆಂಗಳೂರಿನ ಪ್ರಮುಖ ಕ್ಷೇತ್ರದಲ್ಲಿ ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಸಲು ಮೈತ್ರಿ ನಾಯಕರು ಮುಂದಾಗಿದ್ದಾರೆ. ಅದೇ ರೀತಿ, ತುಮಕೂರಿನಲ್ಲಿ ಮಾಜಿ ಸಚಿವ, ಬಿಜೆಪಿ ನಾಯಕ ವಿ.ಸೋಮಣ್ಣ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಇನ್ನು ಚಿಕ್ಕಬಳ್ಳಾಪುರದಲ್ಲಿ ಮಾಜಿ ಆರೋಗ್ಯ ಸಚಿವ, ಬಿಜೆಪಿ ನಾಯಕ ಡಾ.ಕೆ.ಸುಧಾಕರ್ ಅವರು ಜೆಡಿಎಸ್ ಚಿಹ್ನೆಯಡಿ ಸ್ರ್ಪಧಿಸುವ ಸಾಧ್ಯತೆ ಇದೆ. ಮೈಸೂರು – ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ನಾಯಕ ಸಾರಾ ಮಹೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮೈತ್ರಿಯಲ್ಲಿ ಹೊಸ ಚಿಂತನೆಯೊಂದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮುನ್ನುಡಿ ಹಾಕುತ್ತಿರುವಂತೆ ಕಾಣುತ್ತಿದೆ.

ಕೇಸರಿ ಶಾಲಿಗೆ ತಡೆ : ಮೊತೊಮ್ಮೆ ಸುದ್ದಿಯಾದ ಕಾಂಗ್ರೆಸ್ ಸರ್ಕಾರದ ನಡೆ

ಇದೊಂದು ಹೊಸ ಚಿಂತನೆಯಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಅಭ್ಯರ್ಥಿಗಳ ಬಗ್ಗೆ ಆತ್ಮೀಯತೆಯ ಪ್ರಜ್ಞಾಯನ್ನು ಬೆಳೆಸುವುದು ಈ ಚಿಂತನೆಯ ಪ್ರಮುಖ ಉದ್ದೇಶ ಆಗಿದೆ. ಗೆಲ್ಲುವುದೇ ಮುಖ್ಯ ಮಾನದಂಡವಾಗಿದ್ದು, ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂದು ಬಿಜೆಪಿಯ ಪ್ರಮುಖರೊಬ್ಬರು ಹೇಳಿದ್ದಾರೆ.

ಎಲ್ಲ ಆಯ್ಕೆಗಳ ಅನ್ವೇಷಣೆ!
ಮುಂದಿನ ವಾರ ಅಭ್ಯರ್ಥಿಗಳ ಮೊದಲ ಪಟ್ಟಿಯ ಕುರಿತು ಅಂತಿಮ ಸುತ್ತಿನ ಚರ್ಚೆ ನಡೆಯಲಿದೆ. ಅಲ್ಲಿ ಕ್ಷೇತ್ರಗಳ ಹಂಚಿಕೆ, ಮೈತ್ರಿ ಅಭ್ಯರ್ಥಿಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂಬ ನಿರೀಕ್ಷೆ ಇದೆ.ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ನಾವು ಅನ್ವೇಷಿಸುತ್ತಿದ್ದೇವೆ ಎಂದು ಹೇಳಿರುವುದು ಚಿಹ್ನೆ ವಿನಿಮಯದ ಸಾಧ್ಯತೆಯನ್ನು ತೆರೆದಿಟ್ಟಿದೆ. ಡಾ.ಸಿ.ಎನ್.ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಚಿಂತನೆಯಿದ್ದು, ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ, ಮೈಸೂರಿನಿಂದ ಸಾರಾ ಮಹೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಮಾತುಕತೆ ನಡೆದಿದೆ.

ಬಿಜೆಪಿ ಮತ್ತು ಜೆಡಿಎಸ್ ಹೃದಯ ತಜ್ಞ ಡಾ ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಬೇಕು ಎಂಬ ಚಿಂತನೆ ಇದೆ. ಆದರೆ ಚುನಾವಣೆಗೆ ಸ್ರ್ಪಧಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮಂಜುನಾಥ್ ಹೇಳಿದ್ದಾರೆ. ದೇಶಾದ್ಯಂತ ಜನರು ನಾನು ಸಂಸದನಾಗಬೇಕೆಂದು ಬಯಸಿದ್ದು, ಚುನಾವಣೆಗೆ ಸ್ರ್ಪಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ನಾನು ರಾಜಕೀಯಕ್ಕೆ ಬಂದರೂ ಶುದ್ಧ ರಾಜಕೀಯಕ್ಕಿಂತ ಸೇವಾ ಕೇಂದ್ರಿತ ರಾಜಕೀಯ ಮಾಡುತ್ತೇನೆ ಎಂದು ಮಂಜುನಾಥ್ ಹೇಳಿರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲೂ ಹಲವು ಸಮಸ್ಯೆಗಳಿವೆ. ಸದ್ಯಕ್ಕೆ ಮಂಜುನಾಥ್ ಅವರ ಹೆಸರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ಆದರೆ, ಅವರು ಅಲ್ಲಿ ಸ್ರ್ಪಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರೇ ಇದ್ದು, ಮಂಜುನಾಥ್ ಅವರಿಗಾಗಿ ಯಾವ ಕ್ಷೇತ್ರವನ್ನು ಬಿಜೆಪಿ ಮೀಸಲಿಡುತ್ತದೆ ಎಂಬುದನ್ನು ನೋಡಬೇಕಿದೆ. ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸ್ರ್ಪಧಿಸಲ್ಲ ಎಂದಿರುವುದರಿಂದ ಬೆಂಗಳೂರು ಉತ್ತರದಲ್ಲಿ ಸಿಎನ್ ಮಂಜುನಾಥ್ ಅವರು ಸ್ರ್ಪಧಿಸಬಹುದು ಎನ್ನಲಾಗಿದೆ.

ಇನ್ನು, ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರದಲ್ಲಿ ಟಿಕೆಟ್ ನೀಡುವ ಪ್ರಸ್ತಾಪಕ್ಕೆ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಎನ್.ಎಸ್.ಶಿವಶಂಕರ ರೆಡ್ಡಿ ಬಿಜೆಪಿ ಕಡೆ ಬರಲು ಮುಂದಾಗಿದ್ದು, ಅಲ್ಲಿ ಮಾಜಿ ಸಚಿವ ಡಾ ಕೆ ಸುಧಾಕರ್‍ಗೆ ಟಿಕೆಟ್ ಕೈತಪ್ಪುವ ಆತಂಕ ಕಾಡುತ್ತಿದೆ.

ಇನ್ನು, ಹೊಸ ಚಿಹ್ನೆ ವಿನಿಮಯ ತಂತ್ರದಡಿ ಅಭ್ಯರ್ಥಿಗಳು ತಮ್ಮ ಮಾತೃಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ಸೇರಬೇಕಾಗುತ್ತದೆ. ಆದರೆ, ಎಲ್ಲ ಮುಖಂಡರು ಈ ತಂತ್ರದ ಪರವಾಗಿಲ್ಲ. ಕಾರ್ಯಕರ್ತರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಟಿಕೆಟ್‍ಗಾಗಿ ಪಕ್ಷ ಬದಲಾಯಿಸುವುದನ್ನು ತಳಮಟ್ಟದ ಕಾರ್ಯಕರ್ತರು ಒಪ್ಪಲ್ಲ ಅನಿಸುತ್ತೆ. ಪಕ್ಷದ ಹಿತದೃಷ್ಟಿಯಿಂದ ನಮ್ಮ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿಯ ಮತ್ತೊಬ್ಬ ನಾಯಕರು ಹೇಳಿದ್ದಾರೆ.

RELATED ARTICLES

Latest News