ಬೆಂಗಳೂರು, ಮಾ.1- ವಿಧಾನಸೌಧದ ಮೊಗಸಾಲೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಖಚಿತಪಡಿಸಿಕೊಳ್ಳಲು ವಿಧಾನಸೌಧ ಠಾಣೆ ಪೊಲೀಸರು ಇನ್ನಷ್ಟು ವಿಡಿಯೋ ತುಣುಕುಗಳನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ವಿಧಾನಸೌಧ ಠಾಣೆ ಪೊಲೀಸರು ಕೆಲವು ಖಾಸಗಿ ಸುದ್ದಿ ವಾಹಿನಿಗಳು ಘಟನೆ ಬಗ್ಗೆ ಪ್ರಸಾರ ಮಾಡಿದ ವಿಡಿಯೋ ಕ್ಲಿಪ್ಪಿಂಗ್ ಪಡೆದುಕೊಂಡು ಅವುಗಳನ್ನು ಈಗಾಗಲೇ ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದಾರೆ.
ಈ ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳಲು ಮತ್ತಷ್ಟು ಸಾಕ್ಷ್ಯಾಧಾರಗಳು ಬೇಕೆಂದು ಎಫ್‍ಎಸ್‍ಎಲ್ ಅಧಿಕಾರಿಗಳು ತನಿಖಾಧಿಕಾರಿಗಳಿಗೆ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಮೊಗಸಾಲೆಯಲ್ಲಿರುವ ಸಿಸಿಟಿವಿ ಫುಟೇಜ್‍ಗಳನ್ನು ತೆಗೆದುಕೊಂಡು ಪೊಲೀಸರು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದಾರೆ. ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ವಿಧಾನಸೌಧ ಠಾಣೆ ಪೊಲೀಸರು ಈತನಕ 14 ಮಂದಿಯನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದುಕೊಂಡಿದ್ದಾರೆ.
ರಾಜ್ಯಸಭಾ ಸದಸ್ಯ ನಾಸಿರ್ ಬೆಂಬಲಿಗ ಬ್ಯಾಡಗಿ ಮಹಮ್ಮದ್ ಶಫಿ ಸೇರಿದಂತೆ ಮೂವರ ಧ್ವನಿಗಳ ಸ್ಯಾಂಪಲ್ ಪಡೆದುಕೊಂಡಿದ್ದು, ಅವುಗಳನ್ನು ಸಹ ಎಫ್‍ಎಸ್‍ಎಲ್‍ಗೆ ನೀಡಲಾಗಿದೆ. ಇದರ ಜತೆಗೆ ಇನ್ನಷ್ಟು ವಿಡಿಯೋ ಹಾಗೂ ಇನ್ನಿತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ. ಈ ಪ್ರಕರಣ ಗಂಭೀರವಾಗಿರುವುದರಿಂದ ತನಿಖಾಧಿಕಾರಿಗಳು ಈತನಕ ನೀಡಿರುವ ಎಲ್ಲ ವಿಡಿಯೋ ಕ್ಲಿಪ್ಪಿಂಗ್ ಮತ್ತು ಸಾಕ್ಷ್ಯಾಧಾರಗಳನ್ನು ಎಫ್‍ಎಸ್‍ಎಲ್ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿಯೊಂದನ್ನೂ ಕೂಲಂಕಶವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಎಫ್‍ಎಸ್‍ಎಲ್ ಸಂಪೂರ್ಣ ವರದಿ ಬರಲು ಮತ್ತಷ್ಟು ಸಮಯದ ಅಗತ್ಯವಿದೆ. ವರದಿ ಬಂದ ನಂತರವಷ್ಟೇ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡುತ್ತಿದ್ದ ಅವರು, ಆದಷ್ಟು ಬೇಗ ವರದಿ ನೀಡುವಂತೆ ನಾವು ಎಫ್‍ಎಸ್‍ಎಲ್ ಅಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.