Sunday, November 24, 2024
Homeರಾಜ್ಯಅರ್ಕಾವತಿ ನದಿಯಲ್ಲಿ ವ್ಯಾಪಕ ಕೊಳಚೆ ಕಳೆ

ಅರ್ಕಾವತಿ ನದಿಯಲ್ಲಿ ವ್ಯಾಪಕ ಕೊಳಚೆ ಕಳೆ

ಬೆಂಗಳೂರು, ಮಾ.3- ದೇವನಹಳ್ಳಿಯ ನಂದಿ ಬೆಟ್ಟದಲ್ಲಿ ಹುಟ್ಟಿ ಕಾವೇರಿ ನದಿ ಸೇರುವ ಅರ್ಕಾವತಿ ನದಿಯಲ್ಲಿ ಕೊಳಚೆ ನೀರಿನಲ್ಲಿ ಬೆಳೆಯುವ ಕಳೆ ವ್ಯಾಪಕವಾಗಿದೆ. ನದಿಯ ಉದ್ದಕ್ಕೂ ಕಳೆ ಹರಡಿಕೊಂಡಿದೆ. ದಿನದಿಂದ ದಿನಕ್ಕೆ ಕಳೆಯ ವ್ಯಾಪ್ತಿ ವಿಸ್ತರಣೆಯಾಗುತ್ತಿದ್ದು, ನೀರಿನಲ್ಲಿ ಬೆಳೆಯುವ ತಾವರೆ ಸೇರಿದಂತೆ ಇತರ ಸಸ್ಯಗಳು ಮರೆಯಾಗುತ್ತಿವೆ. ಚರಂಡಿಯಂತಹ ಕೊಳಚೆ ನೀರಿನಲ್ಲಿ ಬೆಳೆಯುವ ಹಯಸಿಂತ್ ಎಂಬ ಕಳೆ ನದಿಯಲ್ಲಿ ಕಂಡುಬರುತ್ತಿದೆ.

ಬೆಂಗಳೂರಿಗೆ ಕುಡಿಯುವ ನೀರು ಪೂರೈಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಕಲುಷಿತಗೊಂಡು ವರ್ಷಗಳೇ ಕಳೆದಿವೆ. ಹೀಗಾಗಿ ಕುಡಿಯುವ ನೀರಿಗೆ ಬಳಕೆಯಾಗುತ್ತಿಲ್ಲ. ಈ ಜಲಾಶಯದಲ್ಲೂ ಕಳೆ ಕಂಡುಬರುತ್ತಿದೆ. ಈ ನೀರು ಮಂಚನಬೆಲೆ ಜಲಾಶಯ ತಲುಪಲಿದೆ. ಮಂಚನಬೆಲೆ ಜಲಾಶಯದಿಂದ ನದಿಗೆ ಅಲ್ಪಪ್ರಮಾಣದಲ್ಲಿ ನೀರು ಬಿಡುವುದರಿಂದ ಯಾವಾಗಲೂ ನೀರು ಇರುತ್ತದೆ.

ಇದರಿಂದ ನದಿಯ ಇಕ್ಕೆಲಗಳ ಕೃಷಿಗೆ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗಿತ್ತು. ಇತ್ತೀಚೆ ಕೊಳಚೆ ನೀರಿನಲ್ಲಿ ಬೆಳೆಯುವ ಕಳೆ ವ್ಯಾಪಕವಾಗಿ ಹರಡುಕೊಳ್ಳುತ್ತಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ನೀರಿನ ಬಣ್ಣ ಕೂಡ ಬದಲಾಗಿದೆ. ಕೊಳಚೆ ನೀರಿನಲ್ಲಿ ಬೆಳೆಯುವ ಹಯಸಿಂತ್ ಎಂಬ ಕಳೆಯನ್ನು ರೈತರು ಜೈವಿಕ ಗೊಬ್ಬರ ತಯಾರಿಕೆಗೆ ಬಳಸಬಹುದು ಎನ್ನುತ್ತಾರೆ ಸಸ್ಯಶಾಸ್ತ್ರಜ್ಞರು. ನದಿಯ ಉದ್ದಕ್ಕೂ ಹರಡಿಕೊಂಡಿರುವ ಈ ಕಳೆ ತೆಗೆದು ಪುನರುಜ್ಜೀವನಗೊಳಿಸದಿದ್ದರೆ ಮುಂದೊಂದು ದಿನ ಅರ್ಕಾವತಿ ನದಿಯೂ ವೃಷಭಾವತಿಯಂತೆ ಕಲುಷಿತ ನದಿಯಾಗುವುದನ್ನು ತಳ್ಳಿಹಾಕುವಂತಿಲ್ಲ.

RELATED ARTICLES

Latest News