ಬೆಂಗಳೂರು,ಮಾ.4- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಣ್ಣ ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ಪ್ರಭಾಕರ್ ಚಿಣಿ ಅವರಿಗೆ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬೇಕೆಂದು ಜಿಲ್ಲಾ ಘಟಕ ಮನವಿ ಮಾಡಿದೆ. ಈ ಸಂಬಂಧ ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ನೇತೃತ್ವದ ಕೊಪ್ಪಳ ಜಿಲ್ಲಾ ಬಿಜೆಪಿ ನಿಯೋಗ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದೆ.
ಜೊತೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿರುವ ನಿಯೋಗವು ಅವರಿಗೆ ಟಿಕೆಟ್ ನೀಡಿದರೆ ಕಾರ್ಯಕರ್ತರು ಗೆಲ್ಲಿಸಿಕೊಡಲಿದ್ದಾರೆ ಎಂಬ ಆಶ್ವಾಸನೆ ನೀಡಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿರುವ ಪ್ರಭಾಕರ್ ಚಿಣಿ ಅವರು ಜಿಲ್ಲೆಯಲ್ಲಿ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದು ನಿಯೋಗವು ಮನವರಿಕೆ ಮಾಡಿಕೊಟ್ಟಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಆದರೂ ಧೃತಿಗೆಡದೆ ಲೋಕಸಭೆ ಚುನಾವಣೆಗೆ ಜಿಲ್ಲೆಯಾದ್ಯಂತ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುತ್ತಿದ್ದಾರೆ. ಪ್ರಭಾಕರ್ ಚಿಣಿಗೆ ಟಿಕೆಟ್ ಸಿಕ್ಕರೆ ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ. ಹಾಲಿ ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ ಅವರಿಗೆ ನಾವು ವಿರೋಧವಿಲ್ಲ. ಆದರೆ ಹಿಂದುಳಿದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಪ್ರಭಾಕರ್ ಚಿಣಿಗೆ ಟಿಕೆಟ್ ಸಿಗಬೇಕು, ರಾಜಕೀಯ ಕ್ಷೇತ್ರಕ್ಕೆ ಉತ್ತಮ ಚಾರಿತ್ರ ಹಿನ್ನಲೆವುಳ್ಳವರು ಬರಬೇಕೆಂಬ ಪ್ರಧಾನಿ ನರೇಂದ್ರಮೋದಿ ಆಶಯಕ್ಕೆ ಇದು ಸಕಾರಾತ್ಮಕವಾಗುತ್ತದೆ ಎಂದು ನಿಯೋಗವು ಹೇಳಿದೆ.
ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯ ಕೋರ್ ಕಮಿಟಿ ಶಿಫಾರಸ್ಸು ಮಾಡುವ ವೇಳೆ ಪ್ರಭಾಕರ್ ಚಿಣಿಗೆ ಸಕಾರಾತ್ಮಕವಾಗಿ ಪರಿಣಮಿಸುವುದಾಗಿ ರಾಜ್ಯ ವರಿಷ್ಠರು ನಿಯೋಗಕ್ಕೆ ಆಶ್ವಾಸನೆ ನೀಡದ್ದಾರೆ ಎಂದು ಗೊತ್ತಾಗಿದೆ.