ಬೆಂಗಳೂರು, ಮಾ.4- ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದ ಬಗ್ಗೆ ಎಫ್‍ಎಸ್‍ಎಲ್‍ನಿಂದ ಸಂಪೂರ್ಣ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಈ ವರದಿಯನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಪದೇ ಪದೇ ವರದಿ ಮುಚ್ಚಿಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ. ಖಾಸಗಿ ವರದಿ ಪರಿಗಣಿಸುವುದಿಲ್ಲ ಎಂದು ತಿಳಿಸಿದರು.
ಎಫ್‍ಎಸ್‍ಎಲ್‍ನಿಂದ ಸಂಪೂರ್ಣ ವರದಿ ಬಂದ ನಂತರ ಬಹಿರಂಗ ಪಡಿಸಲಾಗುವುದು. ಆ ಬಗ್ಗೆ ಅನುಮಾನ ಬೇಡ ಎಂದ ಅವರು, ವಿಡಿಯೋ ಪರಿಶೀಲಿಸಲು ಖಾಸಗಿ ಲ್ಯಾಬೊರೋಟರಿ ಇದೆಯೇ? ಖಾಸಗಿಯಾಗಿ ವಿಡಿಯೋ ಪರಿಶೀಲಿಸಲು ಯಾವ ಅನುಮತಿ ಇತ್ತು? ಖಾಸಗಿಯಾಗಿ ಪರಿಶೀಲನೆಗೆ ಒಳಪಡಿಸಬಹುದೇ? ಯಾರು ಎನ್‍ಓಸಿ ಕೊಟ್ಟಿದ್ದರು? ಆರೋಪಿತ ವಿಡಿಯೋಗೆ ಸಂಬಂಧಿಸಿದ ವಿಚಾರ ಬಹಿರಂಗಗೊಳಿಸಲು ಅಧಿಕಾರವಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಎನ್‍ಐಎ ಹಾಗೂ ಎನ್‍ಎಸ್‍ಜಿ ತಂಡಗಳು ಆಗಮಿಸಿ ತನಿಖೆ ನಡೆಸುತ್ತಿವೆ. ಬಾಂಬ್ ಸ್ಪೋಟ ಘಟನೆ ನಡೆದ ಬಳಿಕ ಎನ್‍ಐಎ ಮತ್ತು ಎನ್‍ಸ್‍ಜಿ ತಂಡಗಳು ತನಿಖೆ ನಡೆಸುತ್ತಿವೆ. ನಮ್ಮ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಿದರು.
ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಸಲಹೆ, ಸೂಚನೆಗಳನ್ನು ನೀಡಲಾಗಿದೆ. ಪ್ರಕರಣ ತನಿಖೆ ನಡೆಯುತ್ತಿರುವುದರಿಂದ ಕೆಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದರು. ಸ್ಪೋಟ ಪ್ರಕರಣದ ಮೂಲ ಪತ್ತೆ ಹಚ್ಚಬೇಕಾಗಿದೆ. ವೈಯಕ್ತಿಕ ವಿಚಾರಕ್ಕೆ ಬಾಂಬ್ ಸ್ಪೋಟ ಮಾಡಲಾಗಿದೆಯೇ? ಯಾವುದಾದರೂ ಸಂಘಟನೆ ಕೈವಾಡ ಅದರ ಹಿಂದೆ ಇದೆಯೇ? ಎಂಬುದು ತನಿಖೆ ಪೂರ್ಣಗೊಂಡ ನಂತರ ಗೊತ್ತಾಗಲಿದೆ ಎಂದು ಹೇಳಿದರು.