ನಾಸಿಕ್, ಆ. 9- ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಕಳೆದ ರಾತ್ರಿ ಲಘು ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ ಮತ್ತೊಂದು ಕಂಪನ ದಾಖಲಾಗಿದ್ದು ಜಿಲ್ಲೆಯ ಕೆಲ ಪ್ರದೇಶಗಳಲ್ಲಿನ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ,ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್ಸಿಎಸ್) ಪ್ರಕಾರ, ಶನಿವಾರ ರಾತ್ರಿ 10 ಗಂಟೆಗೆ ನಾಸಿಕ್ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಬಳಿಕ ಇಂದು ಬೆಳಗ್ಗೆ 5.33ಕ್ಕೆ 3.3 ತೀವ್ರತೆಯ ಕಂಪನ ದಾಖಲಾಗಿದೆ.
ಮಹಾರಾಷ್ಟ್ರ-ಗುಜರಾತ್ ಗಡಿಯ ಸಮೀಪದ ಹಟಗಡ್ ಪರ್ವತ ಶ್ರೇಣಿಯ ಬಳಿಯ ಭಾನ್ವಾಡ್ ಪ್ರದೇಶದಲ್ಲಿ ಭೂಮಿಯಿಂದ ಸುಮಾರು 5 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಸಿಕ್ ನಗರ ಸೇರಿದಂತೆ ಸುರ್ಗಾಣಾ, ಕಳವಣ್, ದೇವುಳಾ, ಚಾಂದವಾಡ್, ಪೇಠ್, ದಿಂಡೋರಿ ಹಾಗೂ ನಿಫಾಡ್ ತಾಲೂಕುಗಳಲ್ಲಿ ಕಂಪನದ ಅನುಭವವಾಗಿದೆ. ಇದರಿಂದ ಆತಂಕಗೊಂಡ ನಿವಾಸಿಗಳು ಮನೆಗಳಿಂದ ಹೊರಗೆ ಓಡಿ ಬಂದರು.
ಸುರ್ಗಾಣಾ ತಾಲೂಕಿನ ಭಾದರ್ ಹಾಗೂ ದಿಂಡೋರಿ ತಾಲೂಕಿನ ನಾನಾಶಿ ಪ್ರದೇಶಗಳಲ್ಲಿನ ಕೆಲವು ಮನೆಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರದೇಶದಲ್ಲಿರುವ ಅಣೆಕಟ್ಟುಗಳನ್ನೂ ಅಧಿಕಾರಿಗಳು ಪರಿಶೀಲಿಸಿದ್ದು, ಯಾವುದೇ ಹಾನಿ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಜನರು ಭಯಪಡುವ ಅಗತ್ಯವಿಲ್ಲ. ಯಾವುದೇ ವದಂತಿಗಳನ್ನು ನಂಬಬಾರದು. ಆದರೆ ಎಲ್ಲರೂ ಎಚ್ಚರಿಕೆಯಿಂದಿದ್ದು, ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಜುಲೈ 25ರಿಂದ 28ರವರೆಗೆ ಹಾಗೂ ಆಗಸ್ಟ್ 6ರಂದು ನಾಸಿಕ್ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿತ್ತು.
