Friday, May 10, 2024
Homeರಾಜ್ಯವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ : ಕಾಂಗ್ರೆಸ್ ನಡೆಗೆ ವ್ಯಾಪಕ ಟೀಕೆ

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ : ಕಾಂಗ್ರೆಸ್ ನಡೆಗೆ ವ್ಯಾಪಕ ಟೀಕೆ

ಬೆಂಗಳೂರು,ಮಾ.5- ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ಆರೋಪಿಗಳ ಪರ ವಕಾಲತ್ತು ವಹಿಸುವ ಮೂಲಕ ಕಾಂಗ್ರೆಸ್ ಮತಬ್ಯಾಂಕ್‍ಗಾಗಿ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬರಲಾರಂಭಿಸಿದೆ. ಫೆಬ್ರವರಿ 27 ರಂದು ರಾಜ್ಯಸಭಾ ಚುನಾವಣೆ ಗೆಲುವಿನ ಸಂಭ್ರಮಾಚರಣೆಯ ನಡುವೆ ಕಾಂಗ್ರೆಸ್‍ನ ವಿಜೇತ ಅಭ್ಯರ್ಥಿ ಸಯ್ಯದ್ ನಾಸಿರ್ ಹುಸೇನ್ ಅವರ ಗುಂಪಿನಲ್ಲಿದ್ದವರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು. ಕೆಲ ಘಂಟೆಗಳಲ್ಲೇ ಇದು ಸುದ್ದಿಯಾಗಿ ಪ್ರಸಾರಗೊಂಡು ವ್ಯಾಪಕ ಚರ್ಚೆಗೆ ಗ್ರಾಸವಾಯಿತು.

ಅದರ ಬೆನ್ನ ಹಿಂದೆಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿಲ್ಲ. ನಾಸಿರ್ ಸಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ ಎಂದು ಆಡಿಯೋವೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ಗ್ರೂಪ್‍ನಲ್ಲಿ ಹರಿಯಬಿಡಲಾಗಿತ್ತು. ಅಲ್ಲಿಂದ ಕೆಲ ಸಚಿವರು ಮೇಲಿಂದ ಮೇಲೆ ಆರೋಪಿಗಳ ಪರ ವಕಾಲತ್ತು ವಹಿಸಲಾರಂಭಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ಅದೇ ದಿನ ರಾತ್ರಿಯೇ ಟ್ವೀಟ್ ಮಾಡಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ತೀರ್ಪು ನೀಡಿದ್ದರು. ವಿಚಿತ್ರ ಎಂದರೆ ಈ ವಿಚಾರವಾಗಿ ಸಂಪುಟದ ಸಚಿವರಲ್ಲಿ ಒಮ್ಮತದ ಕೊರತೆ ಕಂಡುಬಂದಿತ್ತು. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಗಳು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಒದ್ದು ಒಳಗೆ ಹಾಕುತ್ತೇವೆ ಎಂದಿದ್ದವರು ಮಾರನೇ ದಿನ ವಿಧಾನಸಭೆ ಅಧಿವೇಶನದಲ್ಲಿ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದರು.

ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಎಫ್‍ಎಸ್‍ಎಲ್ ವರದಿ ಬಂದ ಬಳಿಕ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಲ್ಲದೆ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಅವರು ತನಿಖೆ ನಡೆಸಲು ಸಮರ್ಥರಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.

ಗೃಹಸಚಿವರು ವಿಶ್ವಾಸ ವ್ಯಕ್ತಪಡಿಸಿದ ತನಿಖಾಕಾರಿಗಳ ಸಾಮಥ್ರ್ಯ ಒಂದು ವಾರವಾದರೂ ಗೊಂದಲದಲ್ಲೇ ಇದ್ದದ್ದು ಪ್ರಶ್ನಾರ್ಹವಾಗಿದೆ. ಎಫ್‍ಎಸ್‍ಎಲ್ ಕ್ಷೇತ್ರದಲ್ಲಿ ಕೆಲಸ ಮಾಡುವ ಖಾಸಗಿ ಸಂಸ್ಥೆ ವಿವಾದಿತ ಆಡಿಯೋ, ವಿಡಿಯೋಗಳ ಬಗ್ಗೆ ಎರಡು ದಿನದಲ್ಲೇ ವರದಿ ನೀಡಿತ್ತು. ಅದು ಸಾಮಾಜಿಕ ಜಾಲತಾಣದಲ್ಲಿ ಮೂರು ದಿನಗಳ ಹಿಂದೆಯೇ ಅಲೆದಾಡಿತ್ತು. ಆದರೂ ಸರ್ಕಾರ ಎಫ್‍ಎಸ್‍ಎಲ್ ವರದಿ ಬಂದಿಲ್ಲ ಎಂಬ ಸಬೂಬುಗಳ ಮೂಲಕವೇ ಒಂದು ವಾರ ಕಾಲಾಹರಣ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.

ಖಾಸಗಿ ಸಂಸ್ಥೆಯ ಎಫ್‍ಎಸ್‍ಎಲ್ ವರದಿಯನ್ನು ಬಿಜೆಪಿ ನಾಯಕರು ಬಹಿರಂಗಪಡಿಸಿ ಟ್ವೀಟ್ ಮೇಲೆ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದಾಗ ಅನಿವಾರ್ಯವಾಗಿ ಒತ್ತಡಕ್ಕೆ ಸಿಲುಕಿದ ಸರ್ಕಾರ ನಿನ್ನೆ ರಾತ್ರಿ ಆರೋಪಿಗಳನ್ನು ಬಂಧಿಸಿದೆ. ದುರಂತ ಎಂದರೆ ನಿನ್ನೆ ಮಧ್ಯಾಹ್ನ ಕೂಡ ಸಚಿವರಾದ ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಘಟನೆಯ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರು ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದರು. ಅಂತಿಮವಾಗಿ ನಿನ್ನೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬೆಂಗಳೂರು ಪೊಲೀಸರು ಎಫ್‍ಎಸ್‍ಎಲ್ ವರದಿ ಮತ್ತು ಸಾಂದರ್ಭಿಕ ಸಾಕ್ಷಿಗಳನ್ನು ಆಧರಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾಂದರ್ಭಿಕ ಸಾಕ್ಷಿಗಳು ಆರಂಭದಿಂದಲೂ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ದೃಢತೆಯಲ್ಲೇ ಇದ್ದವು. ಎಫ್‍ಎಸ್‍ಎಲ್ ವರದಿ ತಾಂತ್ರಿಕ ಅಂಶಗಳಿಂದ ಕೂಡಿದ್ದರಿಂದಾಗಿ ಸರ್ಕಾರದ ವಾದವನ್ನು ಜನ ಕೂಡ ನಂಬಿದ್ದರು. ಆದರೆ ಖಾಸಗಿ ವರದಿ ಬಹಿರಂಗವಾದ ಬಳಿಕ ಬೇರೆ ದಾರಿ ಕಾಣದೆ ಕ್ರಮ ಕೈಗೊಂಡಿದ್ದು ಸರ್ಕಾರದ ಸಾಮಥ್ರ್ಯವನ್ನು ಪ್ರಶ್ನಿಸುವಂತೆ ಮಾಡಿದೆ.

ಬೆಂಗಳೂರು ಸ್ಪೋಟ ಪ್ರಕರಣದಲ್ಲೂ ಮೂರು ದಿನಗಳ ಬಳಿಕ ಎನ್‍ಐಎ ತನಿಖೆಗೆ ವಹಿಸಲಾಗಿದೆ. ಅತೀ ಹೆಚ್ಚು ಅತ್ಯಾಧುನಿಕತೆ ಹಾಗೂ ಸಾಮಥ್ರ್ಯ ಹೊಂದಿರುವ ರಾಜ್ಯದ ಪೊಲೀಸರು ಘಟನೆಯಾಗಿ 36 ಗಂಟೆ ಕಳೆದರೂ ಸಿಸಿಟಿವಿಯ ಪರಿಶೀಲನೆಯಲ್ಲೇ ಕಾಲಾಹರಣ ಮಾಡಿದ್ದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಿಜೆಪಿ ಆರಂಭದಿಂದಲೂ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ, ಮತ ಬ್ಯಾಂಕ್‍ಗಾಗಿ ಓಲೈಕೆಯಲ್ಲೇ ಮುಳುಗಿದೆ ಎಂಬ ಟೀಕೆ ಮಾಡುತ್ತಲೇ ಬಂದಿದೆ. ಪಾಕಿಸ್ತಾನ್ ಪರ ಜಿಂದಾಬಾದ್ ಪ್ರಕರಣ ಸೇರಿದಂತೆ ಬೆಂಗಳೂರಿನ ಸ್ಪೋಟ ಪ್ರಕರಣಗಳಲ್ಲಿ ಬಿಜೆಪಿ ಟೀಕೆ ಕಾಂಗ್ರೆಸ್ ಅನ್ನು ತಲೆ ತಗ್ಗಿಸುವಂತೆ ಮಾಡಿದೆ. ರಾಜಕಾರಣಕ್ಕಾಗಿ ಆಂತರಿಕ ಭದ್ರತಾ ವಿಷಯದಲ್ಲೂ ರಾಜಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‍ನ ನಡವಳಿಕೆಗಳು ಸಾಕಷ್ಟು ಟೀಕೆಗೆ ಗುರಿಯಾಗಿವೆ.

RELATED ARTICLES

Latest News