ಬೆಂಗಳೂರು,ಮಾ.5-ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ಎಫ್‍ಎಸ್‍ಎಲ್ ವರದಿಯಲ್ಲಿ ಖಚಿತವಾದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರ ಸಂದರ್ಭೋಚಿತವಾಗಿ ನಡೆದುಕೊಂಡಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ನಿಜ. ಆದರೆ ಯಾರು ಕೂಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅದರ ಕುರಿತಂತೆ ತನಿಖೆ ನಡೆಯುತ್ತಿದೆ. ಮೂವರು ಆರೋಪಿಗಳನ್ನು ನಿನ್ನೆ ನ್ಯಾಯಾೀಧಿಶರ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದುಕೊಂಡಿದ್ದೇವೆ. ಇಷ್ಟೇ ಜನ ಇದ್ದಾರೆಯೇ ಅಥವಾ ಬೇರೆಯವರು ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತೇವೆ ಎಂದರು.
ಎಫ್‍ಎಸ್‍ಎಲ್ ವರದಿಯನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿರುವುದರಿಂದ, ವರದಿಯನ್ನು ಬಹಿರಂಗಪಡಿಸುವ ಅಗತ್ಯ ಏನಿದೆ. ನಾನೇ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. ಅದನ್ನು ಖಚಿತಪಡಿಸಿಕೊಂಡ ಬಳಿಕವೇ ನಾವು ಕ್ರಮ ಕೈಗೊಂಡಿದ್ದೇವೆ. ವಿರೋಧಪಕ್ಷಗಳು ಹೇಳಿದಾಕ್ಷಣ ಸಾಕ್ಷ್ಯ ಆಧಾರವಿಲ್ಲದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪುನರ್ ಉಚ್ಚರಿಸಿದರು.
ಘಟನೆಗೆ ಸಂಬಂಧಪಟ್ಟಂತೆ ಗೃಹಸಚಿವನಾಗಿ ನಾನು ಅಥವಾ ನಮ್ಮ ಇಲಾಖೆಯ ಡಿಜಿಪಿ, ಪೊಲೀಸ್ ಆಯುಕ್ತರು ನೀಡುವ ಹೇಳಿಕೆಗಳು ಮಾತ್ರ ಅಧಿಕೃತ. ಉಳಿದಂತೆ ಬೇರೆಯವರಿಗೆ ಹೆಚ್ಚಿನ ಮಾಹಿತಿಗಳು ಇರುವುದಿಲ್ಲ. ಅವರು ಏನೇ ಹೇಳಿದರೂ ಅದು ವೈಯಕ್ತಿಕ ಅಭಿಪ್ರಾಯಗಳು ಮಾತ್ರ ಎಂದರು.
ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿಯವರು ಹೇಳಿದಂತೆಲ್ಲಾ ಕ್ರಮ ಕೈಗೊಳ್ಳಲಾಗುವುದಿಲ್ಲ. ರಾಜ್ಯದಲ್ಲಿ ಕಾನೂನು ನಿಯಮಗಳು ಅಸ್ತಿತ್ವದಲ್ಲಿವೆ ಎಂದರು. ಈ ಘಟನೆಯಲ್ಲಿ ಸರ್ಕಾರಕ್ಕೆ ಯಾವುದೇ ಮುಜುಗರವಾಗಿಲ್ಲ. ಪಾಕ್ ಪರ ಘೋಷಣೆ ಕೂಗಲು ಸರ್ಕಾರವೇನು ಪ್ರಾಯೋಜಕತ್ವ ನೀಡಿರಲಿಲ್ಲ. ಘೋಷಣೆ ಖಚಿತವಾಗಬೇಕೆಂದು ಕಾಯುತ್ತಿದ್ದೆವು. ಈಗ ಖಚಿತವಾಗಿದೆ. ಆರೋಪಿಗಳನ್ನು ಬಂಧಿಸಿದ್ದೇವೆ. ಇದಕ್ಕಾಗಿ ಸರ್ಕಾರವನ್ನು ಪ್ರಶಂಸಿಸಬೇಕು. ನಾವು ಒಳ್ಳೆಯ ಕೆಲಸ ಮಾಡಿದ್ದೇವೆ. ಯಾವುದೇ ಮುಲಾಜಿಲ್ಲದೇ ಆರೋಪಿಗಳನ್ನು ಬಂಧಿಸಿದ್ದೇವೆ ಎಂದರು.
ಘಟನೆಯ ದಿನ ವಿಧಾನಸೌಧದ ಭದ್ರತೆಗೆ ನಿಯೋಜರಾಗಿದ್ದ ಪೊಲೀಸ್ ಅಧಿಕಾರಿಗಳಿಂದ ಲೋಪಗಳಾಗಿದ್ದರೆ ಅಂತವರ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಇದಕ್ಕೆ ನಮಗೆ ಯಾರ ಸಲಹೆಯೂ ಬೇಕಿಲ್ಲ ಎಂದು ಹೇಳಿದರು. ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರರು ಆರೋಪಿಗಳ ಕುರಿತು ಸಮರ್ಥಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಆಯಾ ಇಲಾಖೆಯ ಸಚಿವರಿಗೆ ಮಾತ್ರ ಸ್ಪಷ್ಟ ಮಾಹಿತಿ ಇರುತ್ತದೆ. ಉಳಿದವರಿಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ಆದರೆ ಸರ್ಕಾರವಾಗಿ ಸಂಪುಟದ ಸಚಿವರು ಹೇಳಿಕೆಗಳನ್ನು ನೀಡಿರುತ್ತಾರೆ. ಆದರೆ ಅವರ ಎಲ್ಲಾ ಮಾತುಗಳಿಗೂ ನಾನು ಸ್ಪಷ್ಟನೆ ನೀಡಲು ಸಾಧ್ಯವಿಲ್ಲ. ಸಂಬಂಧಪಟ್ಟವರೇ ಉತ್ತರ ನೀಡಬೇಕು ಎಂದರು.
ಸ್ಪೋಟ ಪ್ರಕರಣ; ಜಂಟಿ ತನಿಖೆ :
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದವರು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಜ್ಯದ ಸಿಸಿಬಿ ಪೊಲೀಸರು ಕೂಡ ತನಿಖೆಗೆ ಕೈ ಜೋಡಿಸಿದ್ದಾರೆ. ಯಾರೇ ತನಿಖೆ ಮಾಡಲಿ ಪ್ರಕರಣವನ್ನು ಬೇಸುವುದು ಮತ್ತು ಸ್ಪೋಟಕ್ಕೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚುವುದು ನಮಗೆ ಮುಖ್ಯ.
ಬೆಂಗಳೂರು ಸ್ಪೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಆಗಮಿಸಿದೆ. ನಮ್ಮ ಪೊಲೀಸರು ಪ್ರಕರಣವನ್ನು ಅವರಿಗೆ ಹಸ್ತಾಂತರಿಸಲಿದ್ದಾರೆ. ನಮಗಿರುವ ಮಾಹಿತಿಯನ್ನು ಎನ್‍ಐಎ ಜೊತೆ ಹಂಚಿಕೊಳ್ಳಲಾಗುವುದು. ಬಸ್‍ನಲ್ಲಿ ಸಂಚರಿಸಿದ ದೃಶ್ಯಾವಳಿಗಳನ್ನು ನೂರಾರು ಕಡೆ ಪರಿಶೀಲಿಸಿ ಸಂಗ್ರಹಿಸಲಾಗಿದೆ. ಕೆಲವು ಮಾಹಿತಿಗಳು ದೊರೆತಿವೆ. ತನಿಖೆ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಜೈಲಿನಲ್ಲಿ ಕೆಲ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಆಧರಿಸಿ ನಮ್ಮ ಪೊಲೀಸರು ದಾಳಿ ನಡೆಸಿ ಈ ಮೊದಲು ಪರಿಶೀಲಿಸಿದ್ದರು. ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ತಂಡಗಳನ್ನು ರಚಿಸಲಾಗಿತ್ತು. ರಾಜ್ಯದ ಭಯೋತ್ಪಾದಕ ನಿಗ್ರಹ ದಳವೂ ಕೂಡ ತನಿಖೆಯಲ್ಲಿ ಭಾಗಿಯಾಗಿದೆ ಎಂದು ತಿಳಿಸಿದರು. ಎನ್‍ಐಎ ತನಿಖಾ ಕಚೇರಿ ಬೆಂಗಳೂರಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿದೆ. ಮಂಗಳೂರಿನಲ್ಲಿ ಕಚೇರಿ ತೆರೆಯುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಪ್ರಕರಣದಲ್ಲೂ ಕ್ರಮ :
2022ರ ನವೆಂಬರ್‍ನಲ್ಲಿ ಬಿಜೆಪಿಯವರೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆಗ ಬಿಜೆಪಿ ಸರ್ಕಾರ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಕಾನೂನು ಎಲ್ಲರಿಗೂ ಒಂದೇ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಅಪರಾಧ. ಹೀಗಾಗಿ ಮಂಡ್ಯ ಜಿಲ್ಲಾ ಪೊಲೀಸರು ಪಾಕಿಸ್ತಾನದ ಪರ ಘೋಷಣೆ ಕೂಗಿದ ಬಿಜೆಪಿಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಆ ವೇಳೆ ಘಟನೆಯ ಬಗ್ಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಈಗ ಬಂದಿದೆ. ಹೀಗಾಗಿ ಕ್ರಮ ಕೈಗೊಂಡಿದ್ದೇವೆ ಎಂದರು.