Friday, May 24, 2024
Homeರಾಜ್ಯಸುಧೀರ್ ಕುಮಾರ್ ಮುರೊಳ್ಳಿಗೆ ಲೋಕಸಭಾ ಟಿಕೆಟ್‍ಗಾಗಿ ತೀವ್ರಗೊಂಡ ಲಾಬಿ

ಸುಧೀರ್ ಕುಮಾರ್ ಮುರೊಳ್ಳಿಗೆ ಲೋಕಸಭಾ ಟಿಕೆಟ್‍ಗಾಗಿ ತೀವ್ರಗೊಂಡ ಲಾಬಿ

ಬೆಂಗಳೂರು,ಮಾ.5- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಸುಧೀರ್ ಮುರೋಳಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಜಿಲ್ಲೆಗಳ ನಾಯಕರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆಯವರು ಇತ್ತೀಚೆಗೆ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಗಳಿವೆ. ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ನೀಡಲು ಸ್ಥಳೀಯ ವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ.

ಎರಡೂ ಜಿಲ್ಲೆಗಳ ಕಾಂಗ್ರೆಸ್ ನಾಯಕರು ಒಟ್ಟಾಗಿ ಮುಖ್ಯಮಂತ್ರಿ ಯವರ ಬಳಿ ನಿಯೋಗ ಬಂದಿದ್ದು, ಕಾಂಗ್ರೆಸ್ ಪಕ್ಷದಲ್ಲೇ ಇರುವ ಹಾಗೂ ಸ್ಥಳೀಯರಾದ ಸುಧೀರ್ ಮುರೋಳಿ ಟಿಕೆಟ್ ನೀಡಬೇಕೆಂದು ಒತ್ತಡ ಹೇರಿದ್ದಾರೆ. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ವಿನಯ್‍ಕುಮಾರ್ ಸೊರಕೆ, ಕಾಂಗ್ರೆಸ್ ನಾಯಕರಾದ ಕಾರ್ಕಳದ ಉದಯ್‍ಕುಮಾರ್ ಶೆಟ್ಟಿ, ಕುಂದಾಪುರದ ದಿನೇಶ್ ಹೆಗ್ಡೆ, ಉಡುಪಿಯ ರಮೇಶ್ ಕಾಂಚನ್, ಉಡುಪಿಯ ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಸೌರವ್ ಬಲ್ಲಾಳ್, ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಉಮಾ ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ನಿಯೋಗ ಇಂದು ಬೆಂಗಳೂರಿನ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದೆ.

ಜಯಪ್ರಕಾಶ್ ಹೆಗ್ಡೆ ಈ ಮೊದಲು ಬಿಜೆಪಿ ಸೇರಿದ್ದರು. ಯಡಿಯೂರಪ್ಪ ಸರ್ಕಾರ ಅವರನ್ನು ಹಿಂದುಳಿದ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಆ ಬಳಿಕ ಜಯಪ್ರಕಾಶ್ ಹೆಗ್ಡೆ ಸಕ್ರಿಯ ರಾಜಕೀಯದಿಂದ ವಿಮುಖರಾಗಿದ್ದರು. ಸ್ವಾಯತ್ತ ಸಂಸ್ಥೆಯಾಗಿರುವ ಹಿಂದುಳಿದ ವರ್ಗಗಳ ಆಯೋಗದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಿಷಯವಾಗಿ ಒಂದಿಷ್ಟು ಗೊಂದಲಗಳಿವೆ. ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಕ್ಷೇತ್ರದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಿ.ಟಿ.ರವಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಗೊಂದಲದ ನಡುವೆ ಜಯಪ್ರಕಾಶ್ ಹೆಗ್ಡೆ ತಮಗೂ ಟಿಕೆಟ್ ನೀಡಿ ಎಂದು ಹಿರಿಯ ನಾಯಕರ ಮುಂದೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ.

ಅತ್ತ ಬಿಜೆಪಿಯಲ್ಲೂ ಪ್ರಯತ್ನ ಮಾಡುತ್ತಾ, ಇತ್ತ ಕಾಂಗ್ರೆಸ್‍ನಲ್ಲೂ ಸ್ರ್ಪಧಿಸುವುದಾಗಿ ಸುದ್ದಿ ಹರಡಿ ಗೊಂದಲ ಮೂಡಿಸುತ್ತಿದ್ದಾರೆ. ಅವರನ್ನು ಸೇರಿಸಿಕೊಳ್ಳುವುದಾದರೆ ಅದು ಹೈಕಮಾಂಡ್ ಇಷ್ಟ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಮಾಡುವುದು ಸರಿಯಲ್ಲ. ಪಕ್ಷ ನಿಷ್ಠರಿಗೆ ಹಾಗೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ವಲಸಿಗ ನಾಯಕರಿಗೆ ಮಣೆ ಹಾಕಿದರೆ ಪಕ್ಷ ನಿಷ್ಠರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಹೀಗಾಗಿ ಕಾಂಗ್ರೆಸ್, ಪಕ್ಷದ ಸಿದ್ದಾಂತ, ವೈಚಾರಿಕತೆ ಹಾಗೂ ಕಾರ್ಯಕ್ರಮಗಳ ಮೇಲೆ ನಂಬಿಕೆ ಇಟ್ಟವರನ್ನು ಪರಿಗಣಿಸಬೇಕು. ಅಧಿಕಾರಕ್ಕಾಗಿ ಪದೇಪದೇ ಪಕ್ಷ ಬದಲಾಯಿಸುವವರಿಗೆ ಮಣೆ ಹಾಕಬಾರದು. ಸ್ಥಳೀಯರ ಭಾವನೆಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ನಿರ್ಧಾರ ತೆಗೆದುಕೊಂಡಿದ್ದೇ ಆದರೆ ಲೋಕಸಭೆ ಚುನಾವಣೆಯಲ್ಲಿ ಆಗುವ ಪರಿಣಾಮಗಳಿಗೆ ನಾವು ಹೊಣೆಯಾಗುವುದಿಲ್ಲ ಎಂದು ನಿಯೋಗದ ನಾಯಕರು ಎಚ್ಚರಿಸಿದ್ದಾರೆ ಎನ್ನಲಾಗಿದೆ.

RELATED ARTICLES

Latest News