ಚಾಮರಾಜನಗರ,ಆ.10-ಅತೀ ವೇಗವಾಗಿ ಬಂದ ಬೊಲೆರೋ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೃತಪಟ್ಟಿರುವ ಘಟನೆ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹನೂರು ತಾಲ್ಲೂಕು ಮಾರ್ಟಳ್ಳಿ ಗ್ರಾಮದ ಯುವರಾಜ್ (50) ಮತ್ತು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶಶಾಂಕ್ (25) ಮೃತಪಟ್ಟವರು.
ಇವರಿಬ್ಬರು ನಿನ್ನೆ ಮಲೈ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಹನೂರು ತಾಲ್ಲೂಕು ಕೋಣನಕೆರೆ ಗ್ರಾಮದ ಬಳಿ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಬೊಲೆರೋ ಚಾಲಕ ವಾಹನ ನಿಲ್ಲಿಸದೇ ಚಾಲನೆ ಮಾಡಿಕೊಂಡು ಹೋಗಿದ್ದಾನೆ.ಸುದ್ದಿ ತಿಳಿದು ರಾಮಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಅಪಘಾತವೆಸಗಿರುವ ವಾಹನ ಹಾಗೂ ಚಾಲಕನಿಗಾಗಿ ಶೋಧ ಕೈಗೊಂಡಿದ್ದಾರೆ.
