ನವದೆಹಲಿ,ಮಾ.6- ಜಾರ್ಖಂಡ್‍ನ ದುಮ್ಕಾ ಜಿಲ್ಲೆಯಲ್ಲಿ ಸ್ಪ್ಯಾನಿಷ್ ಪ್ರವಾಸಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ಗಾಯಕಿ ಚಿನ್ಮಯಿ ಶ್ರೀಪಾದ ಪ್ರತಿಕ್ರಿಯಿಸಿದ್ದು, ಘಟನೆಯಿಂದ ಎಲ್ಲಾ ಭಾರತೀಯರು ನಾಚಿಕೆಪಡಬೇಕು ಎಂದು ಹೇಳಿದ್ದಾರೆ.
ಸ್ಪೇನ್‍ನ ಮಹಿಳೆ ಕಳೆದ ಶುಕ್ರವಾರ ಹನ್ಸ್‍ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‍ನಲ್ಲಿ ತನ್ನ ಪತಿಯೊಂದಿಗೆ ತಾತ್ಕಾಲಿಕ ಟೆಂಟ್‍ನಲ್ಲಿ ರಾತ್ರಿ ಕಳೆಯುತ್ತಿದ್ದಾಗ ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ದಂಪತಿಗಳು ಬಾಂಗ್ಲಾದೇಶದಿಂದ ಎರಡು ಮೋಟಾರ್ ಸೈಕಲ್‍ಗಳಲ್ಲಿ ದುಮ್ಕಾ ತಲುಪಿ ಬಿಹಾರ ಮತ್ತು ನಂತರ ನೇಪಾಳಕ್ಕೆ ತೆರಳುತ್ತಿದ್ದರು.
ಎಕ್ಸ್‍ನಲ್ಲಿ ಶ್ರೀಪಾದ ಅವರು, ಕೆಲವೇ ಭಾರತೀಯರು ಒಲಿಂಪಿಕ್ ಪದಕವನ್ನು ಗೆದ್ದಾಗ ಎಲ್ಲಾ ಭಾರತೀಯರು ಹೆಮ್ಮೆಪಡಬಹುದಾದರೆ, ಕೆಲವರು ಪುರುಷರು ಅತ್ಯಾಚಾರ ಮಾಡಿದಾಗ ಎಲ್ಲಾ ಭಾರತೀಯರು ನಾಚಿಕೆಪಡಬಹುದು ಎಂದು ಹೇಳಿದರು. ನಟರಾದ ದುಲ್ಕರ್ ಸಲ್ಮಾನ್ ಮತ್ತು ರಿಚಾ ಚಡ್ಡಾ ಕೂಡ ಆಪಾದಿತ ಸಾಮೂಹಿಕ ಅತ್ಯಾಚಾರದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಅಪರಾಗಳನ್ನು ನ್ಯಾಯಾಂಗಕ್ಕೆ ತರಬೇಕೆಂದು ಒತ್ತಾಯಿಸಿದ್ದಾರೆ.
ಭಾರತದಾದ್ಯಂತ ನಾನು ಸುಮಾರು 20,000 ಕಿಮೀ ಸುರಕ್ಷಿತವಾಗಿ ಪ್ರಯಾಣಿಸಿರುವುದರಿಂದ ಭಾರತದ ಜನರ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಅತ್ಯಾಚಾರಕ್ಕೊಳಗಾದ ಸ್ಪೇನ್ ಮಹಿಳೆ ಹೇಳಿಕೊಂಡಿದ್ದಾರೆ. ತಮ್ಮ ಪತಿಯೊಂದಿಗೆ ತಮ್ಮ ಮೋಟಾರ್‍ಸೈಕಲ್‍ನಲ್ಲಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿಶ್ವ ಪ್ರವಾಸವನ್ನು ಮುಂದುವರಿಸುವುದಾಗಿ ಹೇಳಿದರು.
ಭಾರತದ ಜನರು ಒಳ್ಳೆಯವರು. ನಾನು ಜನರನ್ನು ದೂಷಿಸುವುದಿಲ್ಲ, ಆದರೆ ನಾನು ಅಪರಾಗಳನ್ನು ದೂಷಿಸುತ್ತೇನೆ. ಭಾರತದ ಜನರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ ಮತ್ತು ನನ್ನೊಂದಿಗೆ ತುಂಬಾ ಕರುಣಾಮಯಿಯಾಗಿದ್ದಾರೆ ಎಂದು 28 ವರ್ಷದ ಮಹಿಳೆ ಹೇಳಿದ್ದಾರೆ.
ನಾವು ಕಳೆದ ಆರು ತಿಂಗಳಿಂದ ಭಾರತದಲ್ಲಿದ್ದು, ಸುಮಾರು 20,000 ಕಿ.ಮೀ ಪ್ರಯಾಣಿಸಿದ್ದೇವೆ. ನಮಗೆ ಎಲ್ಲಿಯೂ ಯಾವುದೇ ತೊಂದರೆಯಾಗಿಲ್ಲ, ಇದು ಮೊದಲ ಬಾರಿಗೆ ಸಂಭವಿಸಿದೆ ಎಂದು ಅವರು ಹೇಳಿದರು. ನನಗೆ ಭಾರತ ಪ್ರವಾಸದ ಉತ್ತಮ ನೆನಪುಗಳಿವೆ ಎಂದು ಅವರು ಹೇಳಿಕೊಂಡಿದ್ದಾರೆ.