Homeರಾಜ್ಯದೇಶದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆಯಿರುವ ನಗರ ಬೆಂಗಳೂರು

ದೇಶದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆಯಿರುವ ನಗರ ಬೆಂಗಳೂರು

Bangalore is the most congested city in the country

ಬೆಂಗಳೂರು,ಆ.10- ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆಯ ಜೊತೆಗೆ ವಿಶ್ವಾದ್ಯಂತ ಮನ್ನಣೆ ಗಳಿಸಿರುವ ಬೆಂಗಳೂರು, ಮತ್ತೊಮೆ ತನ್ನ ದೀರ್ಘಕಾಲದ ಸಮಸ್ಯೆಯಾದ ಭೀಕರ ಸಂಚಾರ ದಟ್ಟಣೆಯಿಂದಾಗಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ.

ನೆದರ್‌ಲ್ಯಾಂಡ್‌್ಸ ಮೂಲದ ಖ್ಯಾತ ನ್ಯಾವಿಗೇಷನ್‌ ಟೆಕ್ನಾಲಜಿ ಸಂಸ್ಥೆ ಟಾವ್ಟಾಮ್‌‍ (TomTom) ಪ್ರಕಟಿಸಿರುವ 2025ರ ಟ್ರಾಫಿಕ್‌ ಇಂಡೆಕ್ಸ್ ವರದಿಯು ನಗರದ ಸಾರಿಗೆ ವ್ಯವಸ್ಥೆಯ ಕಳಾಹೀನ ಚಿತ್ರಣವನ್ನು ಮತ್ತೊಮೆ ತೆರೆದಿಟ್ಟಿದೆ.

ವರದಿಯ ಆತಂಕಕಾರಿ ಮುಖ್ಯಾಂಶಗಳು :
ಸಮಯದ ನಷ್ಟ:
ಬೆಂಗಳೂರಿನಲ್ಲಿ ಸರಾಸರಿ 10 ಕಿಲೋಮೀಟರ್‌ ಪ್ರಯಾಣಿಸಲು ಪ್ರಸ್ತುತ 36 ನಿಮಿಷ 9 ಸೆಕೆಂಡ್‌ ಬೇಕಾಗುತ್ತಿದೆ.ದಟ್ಟಣೆ ಮಟ್ಟ: ನಗರದ ಸರಾಸರಿ ಸಂಚಾರ ದಟ್ಟಣೆಯ ಮಟ್ಟವು ಶೇ.74.4ಕ್ಕೆ ಏರಿಕೆಯಾಗಿದ್ದು, 2024ಕ್ಕೆ ಹೋಲಿಸಿದರೆ ಇದು ಶೇ. 1.7ರಷ್ಟು ಹೆಚ್ಚಾಗಿದೆ.

ವಾಹನಗಳ ಕಡಿಮೆ ವೇಗ:
ಪೀಕ್‌ ಅವರ್‌ನಲ್ಲಿ ವಾಹನಗಳ ಸರಾಸರಿ ವೇಗ ಕೇವಲ ಗಂಟೆಗೆ 13.9 ಕಿ.ಮೀ.ಗೆ ಕುಸಿದಿದೆ.

ವರ್ಷಕ್ಕೆ 168 ಗಂಟೆ ನಷ್ಟ:
ರಶ್‌ ಅವರ್‌ ಟ್ರಾಫಿಕ್‌ನಲ್ಲೇ ಸಿಲುಕಿ ಬೆಂಗಳೂರಿಗರು ವರ್ಷವೊಂದರಲ್ಲಿ ಸರಿಸುಮಾರು 168 ಗಂಟೆಗಳು (ಅಂದರೆ ಸುಮಾರು 7 ದಿನಗಳ ಕಾಲ) ರಸ್ತೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮೆಕ್ಸಿಕೋ ಸಿಟಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿ ದಾಖಲಾಗಿದೆ.
ಇನ್ನು ಭಾರತದ ಇತ್ತೀಚಿನ ಮಹಾನಗರಗಳ ಪಟ್ಟಿಯನ್ನು ನೋಡುವುದಾದರೆ:
ಬೆಂಗಳೂರು: 74.4%
ಪುಣೆ: 71.1%
ಮುಂಬೈ: 63.2%
ನವದೆಹಲಿ: 60.2%
ಕೋಲ್ಕತ್ತಾ: 58.9%
ಇತರ ಪ್ರಮುಖ ಮಹಾನಗರಗಳಿಗಿಂತ ಬೆಂಗಳೂರಿನಲ್ಲಿ ದಟ್ಟಣೆಯ ಸಮಸ್ಯೆ ತೀವ್ರವಾಗಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ.

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ನಿರಂತರವಾಗಿ ಉಲ್ಬಣಿಸುತ್ತಿರುವುದಕ್ಕೆ ಟಾಮ್‌ಟಾಮ್‌ ವರದಿಯ ಹಿಂದಿನ ವರ್ಷಗಳ ಅಂಕಿ ಅಂಶಗಳೇ ಸಾಕ್ಷಿ.
2022: 10 ಕಿ.ಮೀ.ಗೆ 29 ನಿಮಿಷ 10 ಸೆಕೆಂಡ್‌
2023: 10 ಕಿ.ಮೀ.ಗೆ 28 ನಿಮಿಷ 10 ಸೆಕೆಂಡ್‌
2024: 10 ಕಿ.ಮೀ.ಗೆ 34 ನಿಮಿಷ 10 ಸೆಕೆಂಡ್‌
2025: 10 ಕಿ.ಮೀ.ಗೆ 36 ನಿಮಿಷ 09 ಸೆಕೆಂಡ್‌
ಕೇವಲ ಎರಡು ವರ್ಷಗಳ ಅಂತರದಲ್ಲಿ (2023 ರಿಂದ 2025ಕ್ಕೆ) 10 ಕಿ.ಮೀ. ಪ್ರಯಾಣದ ಸಮಯದಲ್ಲಿ ಬರೋಬ್ಬರಿ ಎಂಟು ನಿಮಿಷಗಳಿಗೂ ಅಧಿಕ ಹೆಚ್ಚಳವಾಗಿರುವುದು ರಸ್ತೆಗಳ ಮೇಲಿನ ಅತಿ ಹೆಚ್ಚಿನ ವಾಹನಗಳ ಒತ್ತಡವನ್ನು ಎತ್ತಿ ತೋರಿಸುತ್ತದೆ.

ಪ್ರಮುಖ ಕಾರಿಡಾರ್‌ಗಳು ಮತ್ತು ಕಾಮಗಾರಿಗಳ ಸಂಕಷ್ಟ :
ಸಿಲ್ಕ್‌‍ ಬೋರ್ಡ್‌, ಮಾರತ್‌ಹಳ್ಳಿ, ಬೆಳ್ಳಂದೂರು, ಕೆ.ಆರ್‌. ಪುರಂ ಮತ್ತು ಹೆಬ್ಬಾಳದಂತಹ ಪ್ರಮುಖ ಜಂಕ್ಷನ್‌ಗಳು ಹಾಗೂ ಔಟರ್‌ ರಿಂಗ್‌ ರೋಡ್‌ ಭಾಗಗಳು ಟ್ರಾಫಿಕ್‌ನ ಪ್ರಮುಖ ಕೇಂದ್ರಗಳಾಗಿ ಉಳಿದಿವೆ. ವಿಶೇಷವಾಗಿ ಹೆಬ್ಬಾಳ-ಸಿಲ್ಕ್‌‍ ಬೋರ್ಡ್‌ ನಡುವಿನ ಸುಮಾರು 31 ಕಿ.ಮೀ. ರಸ್ತೆಯಲ್ಲಿ ಮೆಟ್ರೋ ಕಾಮಗಾರಿಗಳು, ಹದಗೆಟ್ಟ ರಸ್ತೆಗಳು, ಗುಂಡಿಗಳು ಮತ್ತು ಕಳಪೆ ನಿರ್ವಹಣೆಯಿಂದಾಗಿ ವಾಹನ ಸವಾರರು ಪ್ರತಿದಿನ ಹೈರಾಣಾಗುತ್ತಿದ್ದಾರೆ.

ಉದಾಹರಣೆಗೆ, ಫೆಬ್ರವರಿ 2025ರಲ್ಲಿ ಹೆಚ್‌ಎಸ್‌‍ಆರ್‌ ಲೇಔಟ್‌ ಸಮೀಪದ ಫ್ಲೈಓವರ್‌ ಬಂದ್‌ನಿಂದಾಗಿ ಸಿಲ್ಕ್‌‍ ಬೋರ್ಡ್‌ ಇಬ್ಲೂರು ಮಾರ್ಗದಲ್ಲಿ ತೀವ್ರ ಸ್ವರೂಪದ ಜಾಮ್‌ ಉಂಟಾಗಿತ್ತು. ಅದೇ ಸಮಯದಲ್ಲಿ, 2024ರಲ್ಲಿ ಸಿಲ್ಕ್‌‍ ಬೋರ್ಡ್‌ನಲ್ಲಿ ಉದ್ಘಾಟನೆಗೊಂಡ ಡಬಲ್‌ ಡೆಕ್ಕರ್‌ ಫ್ಲೈಓವರ್‌ನಿಂದಾಗಿ ಸ್ಥಳೀಯ ಮಟ್ಟದಲ್ಲಿ ದೈನಂದಿನ ಸಂಚಾರ ದಟ್ಟಣೆಗಳು ಸುಮಾರು ಶೇ.50 ರಷ್ಟು ಇಳಿಕೆಯಾಗಿರುವುದು ಸಕಾರಾತಕ ಬೆಳಕಾಗಿದ್ದರೂ, ಇದು ಇಡೀ ನಗರದ ಸಮಸ್ಯೆಗೆ ಸಂಪೂರ್ಣ ಪರಿಹಾರ ನೀಡಿಲ್ಲ.

ಮಳೆ ಮತ್ತು ಮೂಲಸೌಕರ್ಯ ವೈಫಲ್ಯ :
ಕೇವಲ ವಾಹನಗಳ ಅಧಿಕ ಸಂಖ್ಯೆ ಮಾತ್ರವಲ್ಲದೆ, ಮಳೆ ಹಾಗೂ ಕಳಪೆ ಮೂಲಸೌಕರ್ಯಗಳು ಟ್ರಾಫಿಕ್‌ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ. 2025ರ ಮೇ 17ರಂದು ಸುರಿದ ಮಳೆ ಮತ್ತು ರಸ್ತೆಗಳಲ್ಲಿ ಮರಗಳು ಬಿದ್ದ ಕಾರಣದಿಂದಾಗಿ ಕೇವಲ 2.5 ಕಿ.ಮೀ. ದೂರ ಕ್ರಮಿಸಲು ಬರೋಬ್ಬರಿ 15 ನಿಮಿಷ ಬೇಕಾದ ಸಂದರ್ಭವು ನಗರದ ಒಳಚರಂಡಿ ಮತ್ತು ರಸ್ತೆ ನಿರ್ವಹಣೆಯ ಅಸ್ತವ್ಯಸ್ತತೆಯನ್ನು ಎತ್ತಿ ತೋರಿಸಿತು.

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸಾರ್ವಜನಿಕ ಸಾರಿಗೆಯ ವಿಸ್ತರಣೆಗೆ ಒತ್ತು ನೀಡಿದೆ. ಪಿಂಕ್‌, ಬ್ಲೂ ಮತ್ತು ಗ್ರೀನ್‌ ಮೆಟ್ರೋ ಮಾರ್ಗಗಳ ವಿಸ್ತರಣೆ ಕಾರ್ಯಗಳು ಭರದಿಂದ ಸಾಗುತ್ತಿವೆ.

ಕಲೇನ ಅಗ್ರಹಾರ-ತಾವರೆಕೆರೆ ಪಿಂಕ್‌ ಲೈನ್‌ ಭಾಗ ಹಾಗೂ ಸಂಪೂರ್ಣ 21 ಕಿ.ಮೀ. ಮಾರ್ಗ.
ಸಿಲ್ಕ್‌‍ ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಬ್ಲೂ ಲೈನ್‌ (ಕೆ.ಆರ್‌.ಪುರಂ -ಎಚ್‌ಎಸ್‌‍ಆರ್‌ ಲೇಔಟ್‌ ಟ್ರಯಲ್‌ ರನ್‌ ಸಿದ್ಧತೆ).
ಆದರೆ, ಅಲ್ಪಾವಧಿಯಲ್ಲಿ ಈ ಮೆಟ್ರೋ ಕಾಮಗಾರಿಗಳೇ ರಸ್ತೆಗಳಲ್ಲಿ ತಾತ್ಕಾಲಿಕ ದಟ್ಟಣೆಯನ್ನು ಹೆಚ್ಚಿಸುತ್ತಿರುವುದು ಪ್ರಸ್ತುತ ಇರುವ ಸವಾಲು.

ಬೆಂಗಳೂರಿನ ಆರ್ಥಿಕತೆ, ಉತ್ಪಾದಕತೆ ಹಾಗೂ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಈ ಟ್ರಾಫಿಕ್‌ ಸಮಸ್ಯೆಗೆ ಕೇವಲ ಫ್ಲೈಓವರ್‌ಗಳ ನಿರ್ಮಾಣವಷ್ಟೇ ಅಲ್ಲದೆ, ಬಸ್‌‍ ವ್ಯವಸ್ಥೆಯ ಬಲವರ್ಧನೆ, ವೈಜ್ಞಾನಿಕ ಪಾರ್ಕಿಂಗ್‌ ನಿಯಂತ್ರಣ, ಪಾದಚಾರಿ ಸ್ನೇಹಿ ಮೂಲಸೌಕರ್ಯ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ನಡುವಿನ ನಿರಂತರ ಸಮನ್ವಯದಿಂದ ಮಾತ್ರ ಟ್ರಾಫಿಕ್‌ ಸಿಟಿ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಸಾಧ್ಯ ಎಂಬುದು ತಜ್ಞರ ಮತ್ತು ಸಾರ್ವಜನಿಕರ ಒತ್ತಾಯವಾಗಿದೆ.

RELATED ARTICLES
spot_img

Latest News