ಬೆಂಗಳೂರು, ಅ.11 ನಗರದ ಐಷಾರಾಯಿ ಹೋಟೆಲ್ಗಳ ಕಿಚನ್ ಕರ್ಮಕಾಂಡ ಬಯಲಿಗೆಳೆದ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳ ಕಣ್ಣು ಇದೀಗ ಆನ್ಲೈನ್ ಫುಡ್ ಡೆಲಿವರಿ ಆ್ಯಪ್ಗಳ ಮೇಲೆ ಬಿದ್ದಿದೆ. ಸಣ್ಣಪುಟ್ಟ ಹೋಟೆಲ್ಗಳಷ್ಟೇ ಅಲ್ಲದೆ ನಗರದ ಪ್ರತಿಷ್ಠಿತ ಐಷಾರಾಮಿ ಹೋಟೆಲ್ಗಳಲ್ಲೂ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿರುವುದು ದಾಳಿ ವೇಳೆ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪುವ ಆಹಾರದ ಮೇಲೂ ನಿಗಾ ಇಡಲು ಆಹಾರ ಸುರಕ್ಷತಾ ಪ್ರಾಧಿಕಾರ ಮುಂದಾಗಿದೆ.
ಆನ್ಲೈನ್ ಫುಡ್ ಡೆಲಿವರಿ ವ್ಯವಸ್ಥೆಯಲ್ಲಿ ಆಹಾರ ತಯಾರಿಕೆ, ಪ್ಯಾಕಿಂಗ್ ಹಾಗೂ ಗ್ರಾಹಕರಿಗೆ ತಲುಪುವವರೆಗಿನ ಗುಣಮಟ್ಟವನ್ನು ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.ಇದರ ಜೊತೆಗೆ, ಮುಂದಿನ ವಾರದಿಂದ ಸೆಂಟ್ರಲೈಜ್ಡ್ ಕಿಚನ್ಗಳ ಮೇಲೂ ವಿಶೇಷ ಪರಿಶೀಲನೆ ನಡೆಸಲು ಇಲಾಖೆ ಯೋಜನೆ ರೂಪಿಸಿದೆ.
ನಗರದ ಹಲವು ಸೆಂಟ್ರಲೈಜ್ಡ್ ಕಿಚನ್ಗಳಲ್ಲಿ ಒಂದೇ ಕಡೆ ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಸಿ, ವಿವಿಧ ರೆಸ್ಟೋರೆಂಟ್ಗಳು ಹಾಗೂ ಫುಡ್ ಡೆಲಿವರಿ ವ್ಯವಸ್ಥೆಗಳ ಮೂಲಕ ಗ್ರಾಹಕರಿಗೆ ಸರಬರಾಜು ಮಾಡಲಾಗುತ್ತದೆ. ಹೀಗಾಗಿ ಒಂದೇ ಅಡುಗೆಮನೆಯಿಂದ ದೊಡ್ಡ ಪ್ರಮಾಣದ ಆಹಾರ ಹಲವು ಕಡೆಗಳಿಗೆ ತಲುಪುವುದರಿಂದ, ಅಲ್ಲಿನ ಸ್ವಚ್ಛತೆ, ಆಹಾರ ತಯಾರಿಕೆಯ ಗುಣಮಟ್ಟ, ಸಂಗ್ರಹಣೆ ಹಾಗೂ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಆಹಾರ ಸುರಕ್ಷತಾ ಪ್ರಾಧಿಕಾರದ ಆಯುಕ್ತ ಶ್ರೀನಿವಾಸ್, ಮುಂದಿನ ವಾರದಿಂದ ಸೆಂಟ್ರಲೈಜ್ಡ್ ಕಿಚನ್ಗಳ ಮೇಲೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ಹೋಟೆಲ್ಗಳ ಬಳಿಕ ಇದೀಗ ಆನ್ಲೈನ್ ಫುಡ್ ಮತ್ತು ಸೆಂಟ್ರಲೈಜ್ಡ್ ಕಿಚನ್ಗಳತ್ತವೂ ಆಹಾರ ಸುರಕ್ಷತಾ ಪ್ರಾಧಿಕಾರದ ಚಾಟಿ ಬೀಸಲಿದ್ದು, ಕಳಪೆ ಆಹಾರ ಪೂರೈಸುವವರಿಗೆ ಬಿಸಿ ಮುಟ್ಟಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.
