Homeಬೆಂಗಳೂರುಬೆಂಗಳೂರು : 350 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಅಗ್ನಿಗಾಹುತಿ

ಬೆಂಗಳೂರು : 350 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಅಗ್ನಿಗಾಹುತಿ

Bengaluru: Fire accident: More than 350 EV vehicles gutted

ಬೆಂಗಳೂರು,ಆ.12-ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಿದ್ದ ಸ್ಥಳದಲ್ಲಿ ಬೆಂಕಿ ಅವಘಡ ಸಂಭವಿಸಿ ಸುಮಾರು 350 ಕ್ಕೂ ಹೆಚ್ಚು ಇವಿ ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಇಲ್ಲಿನ ಎನ್‌ಆರ್‌ಐ ಲೇಔಟ್‌ನ ಖಾಲಿ ಜಾಗದಲ್ಲಿ 500 ಹೆಚ್ಚು ಇವಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ.

ಈ ವಾಹನಗಳನ್ನು ಝೆಪ್ಟೋ, ಸ್ವಿಗ್ಗಿ ಹಾಗೂ ಝೆಮ್ಯಾಟೋ ಸಂಸ್ಥೆಗಳ ಡೆಲಿವರಿ ಸಿಬ್ಬಂದಿಗೆ ದಿನದ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಡೆಲಿವರಿ ಬಾಯ್‌್ಸ ಬೆಳಗ್ಗೆ ತೆಗೆದುಕೊಂಡು ಹೋಗಿ ರಾತ್ರಿ ಈ ಸ್ಥಳಕ್ಕೆ ತಂದು ಬಿಡುತ್ತಾರೆ.

ಸರ್ವಿಸ್‌ ವಾಹನಗಳು ಸಹ ಈ ಸ್ಥಳದಲ್ಲಿ ನಿಲುಗಡೆ ಮಾಡಲಾಗಿತ್ತು. ನಿನ್ನೆ ಸಂಜೆ 7 ಗಂಟೆ ಸುಮಾರಿನಲ್ಲಿ ವಾಹನಗಳಿದ್ದ ಆವರಣದ ಗೇಟ್‌ಗೆ ಎಂದಿನಂತೆ ಬೀಗ ಹಾಕಲಾಗಿತ್ತು. ಈ ಆವರಣದಲ್ಲಿ ರಾತ್ರಿ 8.30 ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡು ವಾಹನಗಳು ಬೆಂಕಿಯಿಂದಾಗಿ ಹೊತ್ತಿ ಉರಿ ದಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಅಕ್ಕಪಕ್ಕದ ಇವಿ ಬೈಕ್‌ಗಳಿಗೂ ತಾಗಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿ ಮುಗಿಲೆತ್ತರಕ್ಕೆ ಹೊಗೆ ಆವರಿಸಿದೆ.

ದಾರಿ ಹೋಕರು ಗಮನಿಸಿ ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರಾದರೂ ಸುಮಾರು 350 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ.

ಬೆಂಕಿ ಹೊತ್ತಿಕೊಳ್ಳಲು ಸದ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಇವಿ ದ್ವಿಚಕ್ರ ವಾಹನದ ಬ್ಯಾಟರಿ ಕಿಡಿಯಿಂದ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ವಾಹನಗಳಿಗೂ ತಾಗಿ ಈ ಅವಘಡ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಮತ್ತೊಂದೆಡೆ ಯಾರಾದರೂ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಇವಿಸ್‌ ಕಂಪನಿಯ ಅಡ್ಮಿನ್‌ ಹರೀಶ್‌, ಜಾಗದ ಮಾಲೀಕರು ತಮಗೆ ರಾತ್ರಿ 8.30 ರ ಸುಮಾರಿನಲ್ಲಿ ಕರೆ ಮಾಡಿ ವಿಷಯ ತಿಳಿಸಿದರು. ನಾನು ತಕ್ಷಣ ಸ್ಥಳಕ್ಕೆ ಬಂದು ನೋಡಿದೆ ಅಷ್ಟರಲ್ಲಾಗಲೇ ಬೈಕ್‌ಗಳೆಲ್ಲಾ ಸುಟ್ಟು ಕರಕಲಾಗಿದ್ದವು.

ಇದುವರೆಗೂ ಈ ರೀತಿಯ ಘಟನೆ ನಡೆದಿರಲಿಲ್ಲ. ದಿನನಿತ್ಯದ ಕೆಲಸ ಮುಗಿದ ನಂತರ ಡೆಲಿವರಿ ಯುವಕರು ವಾಹನಗಳನ್ನು ಪಾರ್ಕ್‌ ಮಾಡಲು ಹಾಗೂ ಸರ್ವಿಸ್‌ಗೆ ಬರುವ ಗಾಡಿಗಳನ್ನು ಈ ಜಾಗದಲ್ಲಿ ನಿಲ್ಲಿಸಲಾಗಿತ್ತು. ಯಾರೋ ಕಿಡಿಗೇಡಿಗಳೇ ಈ ಕೃತ್ಯವೆಸಗಿರಬಹುದೆಂಬ ಅನುಮಾನವಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News