ಬೆಂಗಳೂರು,ಮಾ.8- ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ್ದ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ರಾಜ್ಯಸರ್ಕಾರ ರದ್ದುಗೊಳಿಸಿದ್ದು, ಹೈಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದೆ. 2021 ರ ಜುಲೈ 14 ರಂದು ಬಿಜೆಪಿ ಸರ್ಕಾರ ಕರ್ನಾಟಕ ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಸ್ಕೀಮ್ ಅನ್ನು ಅನುಷ್ಠಾನಕ್ಕೆ ತಂದಿತ್ತು. ಸರ್ಕಾರದ ಯೋಜನೆಯಾಗಿದ್ದರಿಂದಾಗಿ ಹಲವಾರು ನವೋದ್ಯಮಗಳು ಈ ಆದೇಶದ ಅನುಸಾರ ಆರಂಭಗೊಂಡಿದ್ದವು.
ಮತ್ತೊಂದೆಡೆ ಬೈಕ್ ಟ್ಯಾಕ್ಸಿ ಸೇವೆ ನಿಯಮ ಬಾಹಿರ ಎಂಬ ಆದೇಶಗಳಿದ್ದು, ಟ್ಯಾಕ್ಸಿ, ಆಟೋ ಸೇರಿದಂತೆ ತೆರಿಗೆ ಪಾವತಿಸುವ ವಾಹನಗಳ ಮಾಲಿಕರು ಗದ್ದಲ ಎಬ್ಬಿಸಿದ್ದರು. ಹಲವಾರು ಕಡೆ ಇದು ವ್ಯಾಪಕ ಪ್ರತಿಭಟನೆ ಮತ್ತು ಗಲಾಟೆಗಳಿಗೂ ಕಾರಣವಾಗಿತ್ತು. ಬೈಕ್ ಟ್ಯಾಕ್ಸಿಗಳಿಂದಾಗಿ ಆಟೋ ಮತ್ತು ನಾಲ್ಕು ಚಕ್ರದ ಟ್ಯಾಕ್ಸಿ ಸೇವೆಗೆ ನಷ್ಟವಾಗುತ್ತಿದೆ ಎಂಬ ಆಕ್ರೋಶಗಳಿದ್ದವು. ಜೊತೆಯಲ್ಲಿ ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆ ಮಹಿಳೆಯರ ಸುರಕ್ಷತೆಗೆ ಪೂರಕವಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಕೆಲವು ಪ್ರಕರಣಗಳೂ ವರದಿಯಾಗಿದ್ದವು.
ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ನೀಡಿದೆ. ಅದನ್ನು ಆಧರಿಸಿ ರಾಜ್ಯಸಾರಿಗೆ ಇಲಾಖೆ ಮಾರ್ಚ್ 6 ರಂದು ಆದೇಶ ಹೊರಡಿಸಿದ್ದು, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಗಳನ್ನು ರದ್ದುಗೊಳಿಸಿದೆ. ಪೆಟ್ರೋಲ್‍ನಿಂದ ಚಲಿಸುವ ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆಗಳಿಗೆ ಮೊದಲಿನಿಂದಲೂ ನಿರ್ಬಂಧ ಇದೆ.
ಪರಿಸರಸ್ನೇಹಿಯಾಗಿರುವ ಎಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಜಾರಿಗೊಳಿಸಿದ್ದ ಯೋಜನೆಗೆ ತೀವ್ರ ವಿರೋಧಗಳು ಕೇಳಿಬಂದಿದ್ದವು. ನ್ಯಾಯಾಲಯಗಳಲ್ಲೂ ಪ್ರಕರಣ ದಾಖಲಾಗಿತ್ತು. ರಾಜ್ಯಸರ್ಕಾರ ಬೈಕ್ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸುವ ಮೂಲಕ ಹೈಕೋರ್ಟ್‍ಗೆ ಕೇವಿಯಟ್ ಸಲ್ಲಿಸಿದೆ.