ಮೈಸೂರು,ಮಾ.8- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣದಲ್ಲಿ ಜನಸ್ಪಂದನ ಸಭೆ ನಡೆಸಲು ಮುಂದಾಗಿದ್ದ ಮಾಜಿ ಶಾಸಕ ಯತೀಂದ್ರ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ ವಾಪಸ್ ಕಳುಹಿಸಿದ್ದಾರೆ. ವರುಣ ವಿಧಾನಸಭಾ ಕ್ಷೇತ್ರದ ಮುದ್ದುಬೀರನಹುಂಡಿ ಗ್ರಾಮದಲ್ಲಿ ಗ್ರಾಮಸ್ಥರು ಯತೀಂದ್ರ ಸಿದ್ದರಾಮಯ್ಯ ಅವರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಯತೀಂದ್ರ ಇದೇ ಕ್ಷೇತ್ರವನ್ನು ಪ್ರತಿನಿಸಿದ್ದರು. ಈ ಬಾರಿ ತಮ್ಮ ತಂದೆ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಯತೀಂದ್ರ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಗ್ರಾಮಕ್ಕೂ ಖುದ್ದು ತೆರಳುವ ಯತೀಂದ್ರ ಜನರ ಅಹವಾಲುಗಳನ್ನು ಕೇಳುತ್ತಿದ್ದಾರೆ. ಅದೇ ರೀತಿ ಮುದ್ದುಬೀರನಹುಂಡಿಗೆ ಆಗಮಿಸಿದಾಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಒಳಗೆ ಬರದಂತೆ ನಿರ್ಬಂಧಿಸಿದ್ದಾರೆ.
ಒಂದು ಹಂತದಲ್ಲಿ ಬಲವಂತವಾಗಿ ಯತೀಂದ್ರ ಜನಸ್ಪಂದನ ನಡೆಸಲು ಮುಂದಾದಾಗ ಸ್ಥಳೀಯರು ಎಳೆದಾಡಿದ್ದಾರೆ. ಈ ಹಂತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಆದರೂ ಗ್ರಾಮಸ್ಥರು ಯಾವುದಕ್ಕೂ ಜಗ್ಗದೇ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಯತೀಂದ್ರ ಸಿದ್ದರಾಮಯ್ಯ ಜನಸ್ಪಂದನ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದ ರಸ್ತೆ ನಿರ್ಮಾಣದ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಚುನಾವಣಾ ಕಾಲದಲ್ಲಿ ಆಗಮಿಸುವ ರಾಜಕಾರಣಿಗಳು ಆನಂತರ ಜನರ ಕಷ್ಟಗಳಿಗೆ ಸ್ಪಂದಿಸುವುದಿಲ್ಲ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.
ತೀವ್ರ ಗದ್ದಲದ ನಡುವೆ ಕೂಡ ಯತೀಂದ್ರ ಸಹನೆ ಕಳೆದುಕೊಳ್ಳದೆ ಸಾವಧಾನದಿಂದಲೇ ಗ್ರಾಮಸ್ಥರ ಆಕ್ರೋಶಗಳಿಗೆ ಪ್ರತಿಕ್ರಿಯಿಸಿದರು ಎಂದು ಸ್ಥಳೀಯರು ವಿವರಿಸಿದ್ದಾರೆ.
ಇತ್ತೀಚೆಗೆ ಸಂಸದ ಪ್ರತಾಪ ಸಿಂಹ ಅವರಿಗೆ ಕ್ಷೇತ್ರದಲ್ಲಿ ಇದೇ ರೀತಿಯ ವಿರೋಧಗಳು ವ್ಯಕ್ತವಾಗಿದ್ದವು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡ ಬಳಿಕ ಹಳೆ ಮೈಸೂರು ಭಾಗದಲ್ಲಿ ವಿಪಕ್ಷಗಳ ಧ್ವನಿ ಏರಿಕೆಯಾಗಿದ್ದು, ಕಾಂಗ್ರೆಸಿಗರಿಗೆ ಕೆಲವು ಕಡೆ ವಿರೋಧಗಳು ಕಂಡುಬರುತ್ತಿವೆ.