Saturday, May 4, 2024
Homeರಾಜ್ಯಮಿತಿಮೀರಿದ ತುಷ್ಟೀಕರಣ ಆರೋಪಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಆದೇಶ

ಮಿತಿಮೀರಿದ ತುಷ್ಟೀಕರಣ ಆರೋಪಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಆದೇಶ

ಬೆಂಗಳೂರು,ಮಾ.8- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಅತಿಯಾದ ತುಷ್ಟೀಕರಣ ನಡೆಯುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡುವಂತಹ ಸರ್ಕಾರಿ ಆದೇಶವೊಂದು ಹೊರಬಿದ್ದಿದೆ. ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಉದ್ಯಮಶೀಲರು ಸ್ಥಾಪಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ(ಕೆಎಸ್‍ಎಫ್‍ಸಿ)ಮೂಲಕ ಶೇ.6ರ ಬಡ್ಡಿ ದರದಲ್ಲಿ 10 ಕೋಟಿ ರೂ. ಸಾಲ ಪಡೆಯುವ ಆದೇಶವನ್ನು ಹೊರಡಿಸಿದೆ.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೀಡುವ ಬಡ್ಡಿ ಸಹಾಯಧನ ಯೋಜನೆಯಡಿ ಸಾಲ ಪಡೆಯುವ ಉದ್ಯಮಿಗಳು ರಾಜ್ಯ ಹಣಕಾಸು ನಿಗಮದ ಆಯಾ ಜಿಲ್ಲಾ ಮಟ್ಟದ ಕಚೇರಿಗಳಿಗೆ ನೇರವಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಯಾವುದೇ ಮಂಜೂರಾತಿ ಸಮಿತಿ ಇರುವುದಿಲ್ಲ. ಕರ್ನಾಟಕ ರಾಜ್ಯ ಹಣಕಾಸು ನಿಗಮದ ಸಾಲ ಮಂಜೂರಾತಿ ನಿಯಮಗಳನ್ವಯ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಮಾಡತಕ್ಕದ್ದು ಎಂದು ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ ಇಲಾಖೆ ಅೀನ ಕಾರ್ಯದರ್ಶಿ ನಾಗರಾಜ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಸಾಮಾನ್ಯವಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ರಾಜ್ಯ ಸರ್ಕಾರ ಕೆಎಸ್‍ಎಫ್‍ಸಿ ವತಿಯಿಂದ ಈವರೆಗೆ 5ರಿಂದ 6 ಕೋಟಿ ರೂ. ಸಾಲವನ್ನು ಶೇ.6ರಿಂದ ಶೇ.11.5ರ ಬಡ್ಡಿ ದರದಲ್ಲಿ ಷರತ್ತುಬದ್ದ ಜಾಮೀನಿನೊಂದಿಗೆ ನೀಡುತ್ತಿತ್ತು. ಉದ್ಯಮಶೀಲರು ಸ್ಥಾಪಿಸುವ ಕೈಗಾರಿಕಾ ಘಟಕಗಳಿಗೆ ಸಾಲ ನೀಡುವಾಗ ಮಂಜೂರಾತಿ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿ ಬಳಿಕ ಸಾಲವನ್ನು ಮಂಜೂರು ಮಾಡಬೇಕೆಂಬ ನಿಯಮವನ್ನು ಹಾಕಲಾಗುತ್ತಿತ್ತು.

ಸರ್ಕಾರದ ಅತಿಯಾದ ನಿಯಮಗಳಿಂದಾಗಿ ಬೇಸತ್ತು ಉದ್ಯಮಗಳನ್ನು ಸ್ಥಾಪಿಸಬೇಕೆಂದು ಮುಂದೆ ಬರುತ್ತಿದ್ದ ಮಹಿಳೆಯರು ಹಿಂದೇಟು ಹಾಕುತ್ತಿದ್ದರು. ಬ್ಯಾಂಕ್‍ನ ನಿಯಮಗಳನ್ನು ನೋಡಿ ಸಾಲ ಪಡೆಯುವುದೇ ಬೇಡ ಎಂಬ ತೀರ್ಮಾನಕ್ಕೆ ಬರುತ್ತಿದ್ದರು. ಇದೀಗ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಜ್ ಮತ್ತು ವಕ್ ಇಲಾಖೆ ಹೊರಡಿಸಿರುವ ಆದೇಶವು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕೇವಲ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಶೇ.6ರ ಬಡ್ಡಿ ದರದಲ್ಲಿ 10 ಕೋಟಿ ರೂ. ಸಾಲವನ್ನು ಮಂಜೂರಾತಿ ಸಮಿತಿಯ ಅನುಮತಿ ಇಲ್ಲದೆ ನೀಡುವಂತೆ ಸೂಚನೆ ಕೊಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಉದ್ಯಮ ಸ್ಥಾಪನೆ ಮಾಡಲು ಮುಂದೆ ಬರುವವರಿಗೆ ಷರತ್ತುಬದ್ಧ ನಿಯಮಗಳನ್ನು ವಿಧಿಸಿ ಸಾಲ ಮಂಜೂರಾತಿ ನೀಡುತ್ತಿತ್ತು. ಈಗ ಒಂದೇ ಸಮುದಾಯವನ್ನು ಓಲೈಕೆ ಮಾಡಲು ನಿಯಮಗಳನ್ನು ಗಾಳಿಗೆ ತೂರಿ ಅಲ್ಪಸಂಖ್ಯಾತರಿಗೆ ಇಷ್ಟು ದೊಡ್ಡ ಮೊತ್ತದ ಸಾಲವನ್ನು ನೀಡುವ ಔಚಿತ್ಯವಾದರೂ ಏನು ಎಂಬುದು ಬಹುತೇಕ ಮಹಿಳಾ ಉದ್ಯಮಿಗಳ ಮೂಲಭೂತ ಪ್ರಶ್ನೆಯಾಗಿದೆ.
ಉದ್ಯಮಿಗಳನ್ನು ಉತ್ತೇಜಿಸುವ ವಿಚಾರದಲ್ಲೂ ಸರ್ಕಾರದ ತಾರತಮ್ಯವೇಕೆ? ಸಮಾನವಾಗಿ ಎಲ್ಲಾ ಉದ್ದಿಮೆದಾರರನ್ನು ಸರ್ಕಾರ ನೋಡಬೇಕಿದೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಒಂದೊಂದು ವರ್ಗಕ್ಕೆ ಒಂದೊಂದು ರೀತಿಯ ಬಡ್ಡಿ ವಿಧಿಸಿ ಸಾಲ ನೀಡುವುದರ ಹಿಂದಿರುವ ಔಚಿತ್ಯವೇನು? ಎಲ್ಲಾ ಉದ್ದಿಮೆದಾರರಿಗೂ ಏಕರೂಪ ಬಡ್ಡಿ ದರ ನಿಗದಿಪಡಿಸಿ ಸಾಲ ನೀಡುವುದು ಸೂಕ್ತವಲ್ಲವೇ? ಈ ರೀತಿಯ ಸರ್ಕಾರದ ಓಲೈಕೆ ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ಉದ್ಯಮ ವಲಯದಿಂದ ವ್ಯಕ್ತವಾಗಿದೆ.

RELATED ARTICLES

Latest News