ಬೆಂಗಳೂರು,ಮಾ.9- ರಾಜ್ಯದಲ್ಲಿ ಜನರು ಕಳೆದ 5 ತಿಂಗಳುಗಳಿಂದ ಬರಗಾಲದ ನೋವನ್ನು ಅನುಭವಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು. ನಗರದ ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬರಗಾಲಪೀಡಿತ ಎಂದು ಘೋಷಿಸುವ ಮೊದಲು ಅಳೆದು ತೂಗಿ 3 ತಿಂಗಳು ಮುಂದೆ ಹಾಕಿದ್ದರು. ರಾಜ್ಯ ಸರಕಾರದಲ್ಲಿ ಹಣ ಇಲ್ಲದ ಕಾರಣ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರು ಎಂದು ಆಕ್ಷೇಪಿಸಿದರು.
ಜನರು ಗುಳೆ ಹೋಗುತ್ತಿದ್ದಾರೆ ಎಂದರೆ ಸರಕಾರ ಒಪ್ಪುತ್ತಿಲ್ಲ. ಹಾಗಿದ್ದರೆ ಮನೆಗಳಿಗೆ ಯಾಕೆ ಬೀಗ ಹಾಕಿದ್ದಾರೆ ಎಂದು ಪ್ರಶ್ನಿಸಿದರು. ಹಳ್ಳಿಗಳಲ್ಲಿ ಕೇವಲ ವಯಸ್ಸಾದವರು ಇದ್ದಾರೆ. ಯುವಕರು, ಮಧ್ಯ ವಯಸ್ಕರರು ಹಳ್ಳಿಗಳಲ್ಲಿ ಇಲ್ಲ. ಹಾಗಿದ್ದರೆ ಅವರು ಎಲ್ಲಿದ್ದಾರೆ ಎಂದು ಕೇಳಿದರು. ಗೋವಾ, ಮಂಗಳೂರು, ಹೈದರಾಬಾದ್ ಕಡೆ ಜನರು ಗುಳೆ ಹೋಗುತ್ತಿದ್ದಾರೆ ಎಂದು ವಿವರಿಸಿದರು.
ಸರಕಾರವು ಕುಂಭಕರ್ಣ ನಿದ್ರೆಯಲ್ಲಿದೆ. ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದೆ. ಎಲ್ಲವನ್ನೂ ಮುಚ್ಚಿಡುತ್ತಿದೆ. ಬಾಗಿಲು ಹಾಕಿದರೂ ಮುಚ್ಚಿಡುವುದು, ಪಾಕಿಸ್ತಾನ ಜಿಂದಾಬಾದ್ ಎಂದರೂ ಮುಚ್ಚಿಡುತ್ತದೆ. ಬರಗಾಲ ಇಲ್ಲ ಎಂಬಂತೆ ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಅಂತಾರಾಷ್ಟ್ರೀಯ ಚಾನೆಲ್ನಲ್ಲಿ ಇದು ಸುದ್ದಿಯಾಗಿದೆ. ಹೀಗಿದ್ದರೂ ಐ.ಟಿ, ಬಿ.ಟಿಯವರು ಬೆಂಗಳೂರಿಗೆ ಹೋಗಲು ಇಷ್ಟ ಪಡುತ್ತೀರಾ ಎಂದು ಆ್ಯಂಕರ್ ಕೇಳಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ. ಬೆಂಗಳೂರಿನ ಮಾನ ಮರ್ಯಾದೆಯನ್ನು ಈ ಕಾಂಗ್ರೆಸ್ ಸರಕಾರ ಹರಾಜು ಹಾಕಿದೆ ಎಂದು ಟೀಕಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಐಟಿ ಸಿಟಿ, ಬಿ.ಟಿ. ಸಿಟಿ ಎಂಬ ಹೆಸರಿದೆ. ಬಿಸಿನೆಸ್ ವಿಷಯದಲ್ಲಿ ಬೆಂಗಳೂರಿಗೆ ಆದ್ಯತೆ ಕೊಡಲಾಗುತ್ತಿತ್ತು ಎಂದ ಅವರು, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ನಾವು ಆಗ್ರಹಿಸಿದ್ದೆವು. ಆದರೆ, ಇಂಡಿ ಒಕ್ಕೂಟದ ಭಾಗಿದಾರ ಪಕ್ಷವೆಂಬ ಕಾರಣಕ್ಕೆ ಸ್ಟಾಲಿನ್ ಅವರ ಕೋರಿಕೆ ಮೇರೆಗೆ ನೀರನ್ನು ಬಿಟ್ಟಿದ್ದಾರೆ. ಈಗ ಶೇ 60 ಬೋರ್ವೆಲ್ಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೂ ಹಾಹಾಕಾರ ಇದೆ ಎಂದು ವಿವರಿಸಿದರು.
ಕಾವೇರಿ ನೀರನ್ನೂ ಶೇ 20ರಿಂದ ಶೇ 30ರಷ್ಟು ಕಡಿಮೆ ಮಾಡಿದ್ದಾರೆ. ಆದರೆ, ಇದರ ಕುರಿತು ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಮುಂದೆ ಮಳೆ ಬರದೆ ಇದ್ದರೆ ಸಮಸ್ಯೆ ತೀವ್ರಗೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಅವರು ಉಪಸ್ಥಿತರಿದ್ದರು.