Homeರಾಜ್ಯಗುಟ್ಕಾ, ಪಾನ್‌ ಮಸಾಲಾ ನಿಷೇಧ ವಾಪಸ್‌..?

ಗುಟ್ಕಾ, ಪಾನ್‌ ಮಸಾಲಾ ನಿಷೇಧ ವಾಪಸ್‌..?

Gutka, Pan Masala Ban Revoked..?

ಬೆಂಗಳೂರು, ಆ.14- ನಿಕೋಟಿನ್‌ ಹಾಗೂ ನಿಷೇಧಿತ ತಂಬಾಕು ಅಂಶಗಳನ್ನು ಒಳಗೊಂಡಿರುವ ಗುಟ್ಕಾ ಮತ್ತು ಪಾನ್‌ ಮಸಾಲಾದ ಉತ್ಪಾದನೆ, ಸಾಗಣೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ನಿಷೇಧಿಸಿ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಎರಡೇ ದಿನಗಳಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಎದುರಾಗಿದೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಿಕೋಟಿನ್‌ ಹಾಗೂ ನಿಷೇಧಿತ ತಂಬಾಕು ಅಂಶಗಳನ್ನು ಒಳಗೊಂಡ ಗುಟ್ಕಾ ಮತ್ತು ಪಾನ್‌ ಮಸಾಲಾದ ಉತ್ಪಾದನೆ, ಸಾಗಣೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ನಿಷೇಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಎರಡು ದಿನಗಳ ಹಿಂದೆ ಆದೇಶ ಹೊರಡಿಸಿದ್ದರು.

ಆದರೆ ಈ ಆದೇಶ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕಟಿತ ಆದೇಶವನ್ನು ಎರಡೇ ದಿನಗಳಲ್ಲಿ ಹಿಂಪಡೆಯುವ ಅನಿವಾರ್ಯತೆ ಆರೋಗ್ಯ ಇಲಾಖೆಗೆ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಮ್ಹಾನ್ಸ್‌ ಕಾರ್ಯಕ್ರಮದಲ್ಲಿ ಘೋಷಣೆ

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಚಿಕಿತ್ಸೆ ಹಾಗೂ ಸಂಶೋಧನೆ ನಡೆಸುತ್ತಿರುವ ನಿಮ್ಹಾನ್ಸ್‌ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ರಾಧಾಕೃಷ್ಣನ್‌ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಿಕೋಟಿನ್‌ ಅಂಶ ಹೊಂದಿರುವ ಗುಟ್ಕಾ ಹಾಗೂ ಪಾನ್‌ ಮಸಾಲಾವನ್ನು ನಿಷೇಧಿಸುವುದಾಗಿ ಘೋಷಿಸಿದ್ದರು. ಮುಖ್ಯಮಂತ್ರಿ ಅವರ ಘೋಷಣೆಯನ್ನು ಆಧರಿಸಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡು ನಿಷೇಧದ ಆದೇಶ ಹೊರಡಿಸಿತ್ತು ಎನ್ನಲಾಗಿದೆ.

ಆದರೆ ಇದೀಗ ಮುಖ್ಯಮಂತ್ರಿ ಅವರ ಗಮನಕ್ಕೆ ತರದೇ ಆದೇಶ ಹೊರಡಿಸಲಾಗಿದೆ ಎಂಬ ಕಾರಣಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ನಿಷೇಧದ ಆದೇಶ ಮುಂದುವರಿಯುತ್ತದೆಯೇ ಅಥವಾ ಹಿಂಪಡೆಯಲಾಗುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES
spot_img

Latest News