ಬೆಂಗಳೂರು, ಆ.14- ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಾಳೆ 80ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಭದ್ರತೆಗಾಗಿ ಅಧಿಕಾರಿಗಳು ಸೇರಿದಂತೆ ಒಟ್ಟು 1,583 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಲ್ಲಾ ವಿಭಾಗಗಳಿಂದ 9 ಮಂದಿ ಡಿಸಿಪಿ, 17 ಮಂದಿ ಎಸಿಪಿ, 49 ಮಂದಿ ಇನ್ಸ್ಪೆಕ್ಟರ್, 106 ಮಂದಿ ಸಬ್ಇನ್ಸ್ಪೆಕ್ಟರ್, 14 ಮಹಿಳಾ ಪಿಎಸ್ಐ, 49 ಮಂದಿ ಎಎಸ್ಐ, 594 ಮಂದಿ ಹೆಡ್ ಕಾನ್ಸ್ಟೆಬಲ್ ಮತ್ತು ಕಾನ್ಸ್ಟೆಬಲ್, 80 ಮಂದಿ ಮಹಿಳಾ ಸಿಬ್ಬಂದಿ ಹಾಗೂ 153 ಮಂದಿ ಸಾದಾ ಉಡುಪಿನ ಅಧಿಕಾರಿಗಳು ಮತ್ತು ಸಿಬ್ಬಂದಿ, 29 ಮಂದಿ ಕ್ಯಾಮೆರಾ ಸಿಬ್ಬಂದಿಯನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ ಎಂದರು.
ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 7 ಕೆಎಸ್ಆರ್ಪಿ ಮತ್ತು ಸಿಎಆರ್ ತುಕಡಿಗಳು, 4 ಅಗ್ನಿಶಾಮಕ ವಾಹನಗಳು, 3 ಆಂಬುಲೆನ್ಸ್ಗಳು, 4 ಖಾಲಿ ವಾಹನಗಳು, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿಸ್ವಾಟ್ ಹಾಗೂ 1 ಆರ್ಐವಿ ತಂಡವನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಮೈದಾನದ ಒಳ ಆವರಣ ಮತ್ತು ಹೊರಭಾಗದಲ್ಲಿ ಒಟ್ಟು 110 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಭದ್ರತಾ ದೃಷ್ಟಿಯಿಂದ ಸಿಬ್ಬಂದಿಯನ್ನು ನಿಯೋಜಿಸಿ ಕಣ್ಗಾವಲು ಇರಿಸಲಾಗಿದೆ. ಮೈದಾನದ ಸುತ್ತಮುತ್ತಲಿನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು 100 ಸಿಸಿಟಿವಿ ಕ್ಯಾಮೆರಾಗಳು, 4 ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್ಎಂಡಿ ಹಾಗೂ 40 ಹೆಚ್ಎಚ್ಎಂಡಿಗಳನ್ನು ಅಳವಡಿಸಲಾಗಿದೆ ಎಂದರು.
ಸಂಚಾರ ನಿರ್ವಹಣೆಗಾಗಿ 3 ಡಿಸಿಪಿ, 6 ಎಸಿಪಿ, 19 ಪಿಐ, 32 ಪಿಎಸ್ಐ, 111 ಎಎಸ್ಐ ಹಾಗೂ 430 ಹೆಡ್ ಕಾನ್ಸ್ಟೆಬಲ್ ಮತ್ತು ಕಾನ್ಸ್ಟೆಬಲ್ಗಳನ್ನು ನಿಯೋಜಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಒಟ್ಟು 1,583 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಆಯುಕ್ತರು ಹೇಳಿದರು.
ಪಾಸ್ ಹೊಂದಿರುವವರಿಗೆ ಪ್ರತ್ಯೇಕ ಪ್ರವೇಶ
ಭದ್ರತೆಯ ದೃಷ್ಟಿಯಿಂದ ಆಹ್ವಾನಿತರಿಗೆ ಪಾಸ್ಗಳನ್ನು ವಿತರಿಸಲಾಗಿದೆ. ಗೇಟ್ ನಂ. 2ರಲ್ಲಿ ಗುಲಾಬಿ ಬಣ್ಣದ ವಿವಿಐಪಿ ಪಾಸ್ ಹೊಂದಿರುವವರಿಗೆ ಪ್ರವೇಶವಿದ್ದು, ಅವರು ಬ್ಲಾಕ್ 1ಎನಲ್ಲಿ ಆಸೀನರಾಗಬೇಕು. ತಿಳಿ ಗುಲಾಬಿ ಬಣ್ಣದ ವಿವಿಐಪಿ ಪಾಸ್ ಹೊಂದಿರುವವರು ಗೇಟ್ ನಂ. 2ರಲ್ಲೇ ಪ್ರವೇಶಿಸಿ, ಬ್ಲಾಕ್ ನಂ. 2 ಮತ್ತು 3ರಲ್ಲಿ ಆಸೀನರಾಗಬೇಕು.
ಗೇಟ್ ನಂ. 4ರಲ್ಲಿ ಬಿಳಿ ಬಣ್ಣದ ಪಾಸ್ ಹೊಂದಿರುವವರಿಗೆ ಪ್ರವೇಶವಿದ್ದು, ಅವರು ಬ್ಲಾಕ್ ನಂ. 4, 5 ಮತ್ತು 6ರಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.ಗೇಟ್ ನಂ. 5ರಲ್ಲಿ ಹಸಿರು ಬಣ್ಣದ ಪಾಸ್ ಹಾಗೂ ಇ-ಪಾಸ್ ಹೊಂದಿರುವ ಸಾರ್ವಜನಿಕರಿಗೆ ಪ್ರವೇಶವಿದ್ದು, ಅವರು ಬ್ಲಾಕ್ ನಂ. 7, 8 ಮತ್ತು 9ರಲ್ಲಿ ಆಸೀನರಾಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಬೆಳಗ್ಗೆ 8.30ರೊಳಗೆ ಪ್ರವೇಶ ಕಡ್ಡಾಯ
ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 8.30ರೊಳಗಾಗಿ ಮಾಣಿಕ್ ಷಾ ಪರೇಡ್ ಮೈದಾನದೊಳಗೆ ಪ್ರವೇಶಿಸಬೇಕು. ಯಾವುದೇ ವಸ್ತುಗಳನ್ನು ಮೈದಾನದೊಳಗೆ ತರಲು ಅವಕಾಶವಿಲ್ಲ. ಮುಖ್ಯವಾಗಿ ಸಿಗರೇಟ್, ಬೆಂಕಿಪೊಟ್ಟಣ, ಕರಪತ್ರಗಳು, ಬಣ್ಣದ ದ್ರಾವಣಗಳು, ಕಪ್ಪು ಕರವಸ್ತ್ರಗಳು, ಮದ್ಯದ ಬಾಟಲಿಗಳು, ಶಸ್ತ್ರಾಸ್ತ್ರಗಳು, ನೀರಿನ ಬಾಟಲಿಗಳು, ತಿಂಡಿ-ತಿನಿಸುಗಳು, ಪಟಾಕಿ ಹಾಗೂ ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ. ಕಾರ್ಯಕ್ರಮದ ಭದ್ರತಾ ದೃಷ್ಟಿಯಿಂದ ತಪಾಸಣೆಗೆ ಒಳಪಟ್ಟು, ಪೊಲೀಸರೊಂದಿಗೆ ಸಹಕರಿಸುವಂತೆ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
