Homeರಾಜ್ಯಹಾಸ್ಯ ಚಟಾಕಿ ಮೂಲಕ ವಿಧಾನಸಭೆಯಲ್ಲಿ ನೂತನ ಸಚಿವರನ್ನು ಪರಿಚಯಿಸಿದ ಸಿಎಂ ಡಿಕೆಶಿ

ಹಾಸ್ಯ ಚಟಾಕಿ ಮೂಲಕ ವಿಧಾನಸಭೆಯಲ್ಲಿ ನೂತನ ಸಚಿವರನ್ನು ಪರಿಚಯಿಸಿದ ಸಿಎಂ ಡಿಕೆಶಿ

CM DK Shivakumar introduced new ministers in the assembly through humor

ಬೆಂಗಳೂರು, ಆ.14- ವಿಧಾನಸಭೆಯಲ್ಲಿ ನೂತನ ಸಚಿವರನ್ನು ಪರಿಚಯಿಸುವ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಎಂದಿನಂತೆ ಉತ್ಸಾಹ ಹಾಗೂ ಪಾದರಸದಂತೆ ಚುರುಕಿನಿಂದ ಕಾಣಿಸಿಕೊಂಡರು.ಕಲಾಪ ಆರಂಭವಾಗುತ್ತಿದ್ದಂತೆ ನೂತನ ಸಚಿವರನ್ನು ವಿಧಾನಸಭೆಗೆ ಪರಿಚಯಿಸುವ ಮುನ್ನ ಸುಮಾರು ಮುಕ್ಕಾಲು ಗಂಟೆ ತಮ್ಮದೇ ಧಾಟಿಯಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಏಳು-ಬೀಳುಗಳನ್ನು ಮೆಲುಕು ಹಾಕಿದರು.

ಹಂಗಾಮಿ ಸಭಾಧ್ಯಕ್ಷರಾಗಿ ಪೀಠದಲ್ಲಿದ್ದ ಟಿ.ಬಿ. ಜಯಚಂದ್ರ ಅವರನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್‌, ‘ನೀವು 1978ರ ಮಾಡೆಲ್‌. ಎಲ್ಲರಿಗಿಂತ ಹಿರಿಯರು. ಹಂಗಾಮಿ ಸ್ಪೀಕರ್‌ ಆಗಿದ್ದಕ್ಕೆ ಬೇಸರಗೊಳ್ಳಬೇಡಿ. ಎಸ್‌.ಎಂ. ಕೃಷ್ಣ, ಜಗದೀಶ್‌ ಶೆಟ್ಟರ್‌ ಅವರು ಸ್ಪೀಕರ್‌ ಆದ ಬಳಿಕವೇ ಮುಖ್ಯಮಂತ್ರಿಯಾಗಿದ್ದಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಪ್ರತಿಯೊಬ್ಬ ಸಚಿವರನ್ನು ಪರಿಚಯಿಸುವಾಗಲೂ ಅವರ ರಾಜಕೀಯ ಹಿನ್ನೆಲೆ ಹಾಗೂ ವಿಶೇಷತೆಗಳನ್ನು ಪ್ರಸ್ತಾಪಿಸಿದರು. ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಪರಿಚಯಿಸುವ ವೇಳೆ ಅವರು ಕುಳಿತಿದ್ದನ್ನು ಗಮನಿಸಿ, ‘ನಿಮ್ಮ ಮುಖವನ್ನು ಸ್ವಲ್ಪ ತೋರಿಸಿ’ ಎಂದು ಹೇಳಿ ಎದ್ದು ನಿಲ್ಲುವಂತೆ ಮಾಡಿದರು.

ಸಚಿವ ಮಧು ಬಂಗಾರಪ್ಪ ಅವರನ್ನು ಪರಿಚಯಿಸುವ ವೇಳೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡ ಡಿ.ಕೆ. ಶಿವಕುಮಾರ್‌, ‘ಅವರ ತಂದೆ ಎಸ್‌. ಬಂಗಾರಪ್ಪ ಅವರ ಕೈಕೆಳಗೆ ನಾನು ಸಚಿವನಾಗಿ ಕೆಲಸ ಮಾಡಿದ್ದೆ. ಈಗ ಮಧು ಬಂಗಾರಪ್ಪ ನನ್ನ ಜೊತೆಗೆ ಸಚಿವರಾಗಿ ಕೆಲಸ ಮಾಡುವ ಯೋಗ ಬಂದಿದೆ’ ಎಂದರು.

ಗಾಂಧಿನಗರದಲ್ಲಿ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಬಂಗಾರಪ್ಪ ಅವರು, ‘ನಾನು ಬಂಧಿಖಾನೆ ಸಚಿವನಾಗಿರುವ ಡಿ.ಕೆ. ಶಿವಕುಮಾರ್‌ ಮುಂದೆ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಅಂದೇ ಆಶೀರ್ವದಿಸಿದ್ದರು. ಅದು ಈಗ ನಿಜವಾಗಿದೆ ಎಂದು ಶಿವಕುಮಾರ್‌ ಸ್ಮರಿಸಿದರು.

ಸಚಿವ ಪುಟ್ಟರಂಗಶೆಟ್ಟಿ ಅವರ ಪರಿಚಯದ ವೇಳೆ ಚಾಮರಾಜನಗರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ತಾವು ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಒಟ್ಟಾಗಿ ತೆರಳಿದ್ದನ್ನು ನೆನಪಿಸಿಕೊಂಡರು. ‘ಇದು ಒಂದು ಅವಧಿಯ ಬೆಳೆ’ ಎಂದು ಗುಲಾಂ ನಬಿ ಆಜಾದ್‌ ಹೇಳಿದ್ದರು. ಆದರೆ ಮೂರು ಬೆಳೆಯಾಗಿ ಈಗ ಪುಟ್ಟರಂಗಶೆಟ್ಟಿ ಸಚಿವ ಸ್ಥಾನ ಅಲಂಕರಿಸಿದ್ದಾರೆ ಎಂದು ಶಿವಕುಮಾರ್‌ ಹಾಸ್ಯಭರಿತವಾಗಿ ಹೇಳಿದರು.

ಕೃಷ್ಣ ಬೈರೇಗೌಡ ಅವರನ್ನು ‘ಡೈನಾಮಿಕ್‌ ಸಚಿವ’ ಎಂದು ಕೊಂಡಾಡಿದ ಮುಖ್ಯಮಂತ್ರಿಯವರು, ಕಂದಾಯ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯು.ಟಿ. ಖಾದರ್‌ ಹಿಂದೆ ವಿಧಾನಸಭೆ ಸಭಾಧ್ಯಕ್ಷರಾಗಿ ನಮಗೆಲ್ಲ ಪಾಠ ಮಾಡುತ್ತಿದ್ದರು. ಈಗ ಸಚಿವರಾಗಿ ಏನು ಪಾಠ ಹೇಳುತ್ತಾರೆ ಎಂಬುದನ್ನು ನೋಡೋಣ ಎಂದು ಸಹೋದ್ಯೋಗಿಗಳ ನಡುವೆ ಹಾಸ್ಯ ಚಟಾಕಿ ಹಾರಿಸಿದರು.

ನಾಗೇಂದ್ರ ಅವರು ನಾಲ್ಕು ಬಾರಿ ಶಾಸಕರಾಗಿದ್ದು, ಇದೀಗ ಸಚಿವರಾಗಿದ್ದಾರೆ ಎಂದು ತಿಳಿಸಿದ ಶಿವಕುಮಾರ್‌, ಬಸವಂತಪ್ಪ ಅವರು ಸಚಿವರಾಗಿರುವುದು ತಮಗೆ ವಿಶೇಷ ಸಂತಸ ತಂದಿದೆ ಎಂದರು. ಪೌರ ಕಾರ್ಮಿಕರ ಮಗನಾದ ಬಸವಂತಪ್ಪ ಅವರು ಈಗ ಮುಜರಾಯಿ ಸಚಿವರಾಗಿ ದೇವರ ಪೂಜೆ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಹೇಳಿದರು.

ಬಳಿಕ ಸಚಿವ ಕೃಷ್ಣ ಬೈರೇಗೌಡ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಅಭಿನಂದಿಸಿದರು. ಮುಖ್ಯಮಂತ್ರಿ ಅವರ ನಾಯಕತ್ವದಲ್ಲಿ ಕರ್ನಾಟಕ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಮಗೆಲ್ಲರಿಗೂ ಮಾದರಿ ನಾಯಕರಾಗಿದ್ದಾರೆ ಎಂದು ಬಣ್ಣಿಸಿದ ಅವರು, ಸಿದ್ದರಾಮಯ್ಯ ಅವರ ಹೆಸರು ಅಜರಾಮರವಾಗಿರಲಿದೆ ಎಂದು ಹೇಳಿದರು.

RELATED ARTICLES
spot_img

Latest News