ಲಖನೌ, ಸೆ. 28- ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಇದುವರೆಗೆ 56 ಮಂದಿ ಪ್ರಾಣ ಕಳೆದುಕೊಂಡಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಈ ಪೈಕಿ ಸೀತಾಪುರದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಅತಿ ಹೆಚ್ಚು ಸಾವು ಸಂಭವಿಸಿರುವ ಜಿಲ್ಲೆ ಇದಾಗಿದೆ. ಲಖಿಂಪುರ ಖೇರಿ, ಬಹ್ರೈಚ್ ಮತ್ತು ಬಲರಾಮ್‌ಪುರದಲ್ಲಿ ತಲಾ ಐದು ಮಂದಿ ಹಾಗೂ ಅಯೋಧ್ಯೆ ಮತ್ತು ಗೋರಖ್‌ಪುರದಲ್ಲಿ ತಲಾ ನಾಲ್ವರು ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜ್ಯಾದ್ಯಂತ 63 ಜಿಲ್ಲೆಗಳಲ್ಲಿ ಭಾರೀ ಮಳೆ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈವರೆಗೆ 1,021 ಮನೆಗಳು ಹಾನಿಗೊಳಗಾಗಿವೆ. ಸರಾಸರಿ 45.1 ಮಿ.ಮೀ. ಮಳೆ ದಾಖಲಾಗಿದೆ. ಮುಂದಿನ 24 ಗಂಟೆಗಳ ಬಳಿಕ ರಾಜ್ಯದ ಹವಾಮಾನದಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿದೆ. ಇದರ ನಡುವೆ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
ಇದರಿಂದಾಗಿ ಘಾಗ್ರಾ ಹಾಗೂ ರಾಪ್ತಿ ನದಿಗಳ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.ಲಖನೌನಲ್ಲಿ ಭಾರೀ ಮಳೆಯಿಂದಾಗಿ ಐತಿಹಾಸಿಕ ಗೇಟ್‌ನ ಒಂದು ಭಾಗ ಕುಸಿದುಬಿದ್ದಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಹಾಗೂ ಪಾದಚಾರಿಗಳ ಓಡಾಟವಿರುತ್ತದೆ. ಆದರೆ ಘಟನೆ ಸಂಭವಿಸಿದ ಸಮಯದಲ್ಲಿ ಕಡಿಮೆ ಜನರಿದ್ದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ.
ಇದಲ್ಲದೆ, ಅಲ್ಲಲ್ಲಿ ವಾಹನಗಳ ಮೇಲೆ ಮರಗಳು ಬಿದ್ದಿರುವ ಘಟನೆಗಳೂ ವರದಿಯಾಗಿವೆ. ಸದ್ಯ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇಪಾಳದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಕ್ಷಣಾ ತಂಡಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ತಕ್ಷಣದ ನೆರವು ಒದಗಿಸುವಂತೆ ಸೂಚಿಸಿದ್ದಾರೆ.
