Homeರಾಷ್ಟ್ರೀಯಶಫಿ ನಂಬಿ ಶವವಾದ ಕಲ್ಯಾಣಿ : 9 ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದ ಸೈತಾನ್

ಶಫಿ ನಂಬಿ ಶವವಾದ ಕಲ್ಯಾಣಿ : 9 ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದ ಸೈತಾನ್

ವಿಜಯವಾಡ, ಸೆ. 28- ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಮಾಂಸದ ಅಂಗಡಿ ಮಾಲೀಕ ಶಫಿ ಎಂಬಾತ ಹಣಕಾಸಿನ ವಿಚಾರಕ್ಕೆ ಆಕೆಯನ್ನು ಹತ್ಯೆ ಮಾಡಿ, ದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದಿರುವ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ವಿಜಯವಾಡ ಸಮೀಪದ ಇಬ್ರಾಹಿಂಪಟ್ಟಣಂ ಕೂಲಿಂಗ್‌ ಕಾಲುವೆಯಲ್ಲಿ ಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದು, ಅವು ಮಂಗಳಗಿರಿ ನಿವಾಸಿ 29 ವರ್ಷದ ಕಲ್ಯಾಣಿಗೆ ಸೇರಿವೆ ಎಂದು ದೃಢಪಡಿಸಿದ್ದಾರೆ.

ಸೆಪ್ಟೆಂಬರ್‌ 19ರಂದು ಇಬ್ರಾಹಿಂಪಟ್ಟಣಂನ ಎನ್‌ಟಿಪಿಎಸ್‌ ಕೂಲಿಂಗ್‌ ಕಾಲುವೆಯಲ್ಲಿ ಮಹಿಳೆಯ ದೇಹದ ಮುಂಡ ಪತ್ತೆಯಾಗಿತ್ತು. ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೆರವಿನಿಂದ ಪೊಲೀಸರು ಕಾಲುವೆಯಲ್ಲಿ ಶೋಧ ನಡೆಸಿ ತಲೆ, ಕಾಲುಗಳು ಹಾಗೂ ಕೈಗಳನ್ನು ಪತ್ತೆಹಚ್ಚಿದ್ದರು. ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಮೃತದೇಹದ ಕುರಿತು ಮಾಹಿತಿ ಹಂಚಿಕೊಂಡ ಹಿನ್ನೆಲೆಯಲ್ಲಿ ಕಲ್ಯಾಣಿಯ ಸಹೋದರ ಆಕೆಯ ಕೈ ಮೇಲಿದ್ದ ಹಚ್ಚೆ ಹಾಗೂ ಇತರ ಗುರುತುಗಳ ಆಧಾರದ ಮೇಲೆ ಮೃತ ಮಹಿಳೆ ಕಲ್ಯಾಣಿ ಎಂದು ದೃಢಪಡಿಸಿದ್ದಾರೆ.

ಪೊಲೀಸರ ಪ್ರಕಾರ, ಕಲ್ಯಾಣಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಆಕೆಗೆ ಭವಾನೀಪುರಂನಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದ ಶಫಿ ಎಂಬಾತನೊಂದಿಗೆ ಆತ್ಮೀಯ ಸಂಬಂಧವಿತ್ತು ಎನ್ನಲಾಗಿದೆ. ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್‌ 17ರಂದು ಮಾತನಾಡುವ ನೆಪದಲ್ಲಿ ಕಲ್ಯಾಣಿಯನ್ನು ಭವಾನೀಪುರಂನಲ್ಲಿರುವ ತನ್ನ ಮನೆಗೆ ಶಫಿ ಕರೆಸಿಕೊಂಡಿದ್ದ ಎನ್ನಲಾಗಿದೆ. ಈ ವೇಳೆ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಶಫಿ ಚಾಕುವಿನಿಂದ ಕಲ್ಯಾಣಿಯ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ನಂತರ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಚೀಲಗಳಲ್ಲಿ ತುಂಬಿ ಕೂಲಿಂಗ್‌ ಕಾಲುವೆಗೆ ಎಸೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಕೃತ್ಯಕ್ಕೆ ಶಫಿಯ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಸಹಕರಿಸಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.

ಕಲ್ಯಾಣಿ ನಾಪತ್ತೆಯಾಗುವ ಮುನ್ನ ಆಕೆಯ ಚಲನವಲನಗಳು, ಸಂಪರ್ಕದಲ್ಲಿದ್ದ ವ್ಯಕ್ತಿಗಳು ಹಾಗೂ ಹತ್ಯೆಗೆ ಕಾರಣವಾಗಿರಬಹುದಾದ ಘಟನೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯ ದೂರವಾಣಿ ಕರೆಗಳ ವಿವರಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೂ ತನಿಖೆ ಮುಂದುವರಿದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಫಿಯನ್ನು ಪ್ರಮುಖ ಆರೋಪಿಯಾಗಿ ಪರಿಗಣಿಸಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಬ್ರಾಹಿಂಪಟ್ಟಣಂ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದ್ದು, ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

ವಿವಾಹೇತರ ಸಂಬಂಧ, ಹಣಕಾಸಿನ ವಿಚಾರ ಹಾಗೂ ವೈಯಕ್ತಿಕ ವೈಮನಸ್ಸು ಹತ್ಯೆಗೆ ಕಾರಣವಾಗಿರಬಹುದೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES
spot_img

Latest News