ಬೆಂಗಳೂರು,ಆ.15- ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿಂದು ಜರುಗಿದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸೇನೆ, ಪೊಲೀಸ್, ಗೃಹರಕ್ಷಕ ದಳ, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥಸಂಚಲನ ಆಕರ್ಷಕವಾಗಿತ್ತು.
ಥಣಿಸಂದ್ರದ ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳು ನಡೆಸಿಕೊಟ್ಟ ವಂದೇ ಮಾತರಂ ಶಾಂತಿ ಮಂತ್ರ ನೃತ್ಯರೂಪಕವು ವಿವಿಧತೆಯಲ್ಲಿ ಏಕತೆಯನ್ನು ಸಾರುವಂತಿತ್ತು. ಸ್ವಾತಂತ್ರ್ಯ ಸಂಗ್ರಾಮದ ನೆನಪನ್ನು ತರಿಸುವಂತಿತ್ತು. ವಿವಿಧ ವೇಷಭೂಷಣ ತೊಟ್ಟ ಮಕ್ಕಳು ರಾಷ್ಟ್ರಧ್ವಜ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಹಿಡಿದು ಆಕರ್ಷಕ ಪ್ರದರ್ಶನ ನೀಡಿದರು.
ಪಿಳ್ಳಣ್ಣ ಗಾರ್ಡನ್ನ ಸಂಯುಕ್ತ ಪದವಿ ಪೂರ್ವ ಕಾಲೇಜಿನ 750 ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದ ವೈಭವವನ್ನು ನಡೆಸಿಕೊಟ್ಟರು. ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣವನ್ನು ಈ ನೃತ್ಯರೂಪಕ ಬಿಂಬಿಸಿತ್ತು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರ ನೆನಪಿಸುವಂತಹ ಚಿತ್ರಣವನ್ನು ನೀಡಿತು.
ಬೀದರ್ ಜಿಲ್ಲೆಯ 70 ಅಕ್ಕಪಡೆ ಮಹಿಳಾ ಸಿಬ್ಬಂದಿ ಬೆಂಗಳೂರು ನಗರದ 100 ಮಹಿಳಾ ಪೊಲೀಸ್ ಸಿಬ್ಬಂದಿಗಳು ಆತರಕ್ಷಣಾ ತಂತ್ರಗಳನ್ನು ಪ್ರದರ್ಶಿಸಿದರು.ಅಕ್ಕ ತಂಡದ ಶಕ್ತಿ ಪ್ರದರ್ಶನವು ಮಹಿಳೆಯರ ಆತವಿಶ್ವಾಸ ಮತ್ತು ದೃಢ ಮನೋಭಾವದ ಸಂಕೇತವಾಗಿತ್ತು. ಆಕರ್ಷಕ ಕಸರತ್ತುಗಳು ಚಿತ್ತಾಕರ್ಷಕವಾಗಿದ್ದವು.
ಶೇಷಾದ್ರಿಪುರ ಶಿಕ್ಷಣ ಸಂಸ್ಥೆ, ಬೆಂಗಳೂರು ನಗರ ವಿವಿ, ರಾಜೀವ್ಗಾಂಧಿ ವಿವಿ, ರೇವಾ ವಿವಿ, ವಿಶ್ವೇಶ್ವರಯ್ಯ ಯೂನಿವರ್ಸಿಟಿಯ 600 ವಿದ್ಯಾರ್ಥಿಗಳು ಭಾರತ್ ಜೋಡೋ ಯುವಸಂಘದ ಯೋಜನೆಯ ಪ್ರದರ್ಶನ ನೀಡಿದರು.ವಿವಿಧ ವೇಷಭೂಷಣ ತೊಟ್ಟು ನಾಡಧ್ವಜ, ರಾಷ್ಟ್ರಧ್ವಜ ಹಿಡಿದು ನಡೆಸಿಕೊಟ್ಟಂತಹ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತ್ತು.
