Friday, November 22, 2024
Homeರಾಜ್ಯಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಪಣ

ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಪಣ

ಬೆಂಗಳೂರು, ಮಾ.10- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ಪೊಲೀಸ್ ಇಲಾಖೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಪೊಲೀಸ್ ರನ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮೆಟ್ಟಿಲುಗಳ ಬಳಿ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಗ್ರೀನ್ ಬೆಂಗಳೂರು, ಮಾದಕ ವ್ಯಸನ ಮುಕ್ತ ಸಮಾಜ, ಸೈಬರ್ ಕ್ರೈಮ್ ತಡೆ ಮತ್ತು ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯಕ್ಕಾಗಿ ಪ್ರತಿ ವರ್ಷ ಪೊಲೀಸ್ ಓಟವನ್ನು ಆಯೋಜಿಸಿ ಜಾಗೃತಿ ಮೂಡಿಸುತ್ತಾರೆ ಎಂದರು. ಪರಿಸರ ಸ್ನೇಹಿಯಾದ ಹಸಿರು ಬೆಂಗಳೂರು ನಿರ್ಮಾಣ ಮಾಡುವ ಅಗತ್ಯ ಇದೆ. ಬೆಂಗಳೂರಿನಲ್ಲಿ ಹಸಿರು ಕಡಿಮಾಗುತ್ತಿದೆ. ಅದನ್ನು ಹೆಚ್ಚಿಸಬೇಕಿದೆ. ಅದೇ ರೀತಿ ಎಲ್ಲರ ದೈಹಿಕ ಕ್ಷಮತೆಗಾಗಿ ಓಟ ಅಗತ್ಯವಿದೆ. ವಿಶೇಷವಾಗಿ ಯುವಕರು ಸಮಾಜದಲ್ಲಿ ಅರ್ಧ ಸಂಖ್ಯೆಯಲ್ಲಿದ್ದಾರೆ. ಎಷ್ಟು ವರ್ಷ ಬದುಕುತ್ತೇವೆಯೋ ಅಷ್ಟು ವರ್ಷವೂ ಆರೋಗ್ಯವಂತರಾಗಿ ಜೀವಿಸಬೇಕು ಎಂದರು.

ಸಮಾಜದಲ್ಲಿ ಯುವಜನ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಯುವಕ-ಯುವತಿಯರೇ ದೇಶದ ಸಂಪತ್ತು, ಅವರು ವ್ಯವಸನಿಗಳಾಗುತ್ತಿರುವುದು ದೃಷ್ಟಕರ. ಈ ನಿಟ್ಟಿನಲ್ಲೆ ಸರ್ಕಾರದ ಪ್ರಯತ್ನ ಮಾತ್ರ ಯಶಸ್ವಿಯಾಗುವುದಿಲ್ಲ. ಸಮಾಜವೂ ಕೈಜೋಡಿಸಬೇಕು ಆಗ ಮಾತ್ರ, ಬೆಂಗಳೂರು, ಕರ್ನಾಟಕ ಹಾಗೂ ಇಡೀ ದೇಶವನ್ನು ಮಾದಕ ವ್ಯಸನ ಮುಕ್ತ ಮಾಡಲು ಸಾಧ್ಯವಾಗುತ್ತದೆ ಎಂದರು.

ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚಾಗುತ್ತಿದೆ. ಅದು ಕಡಿಮೆಯಾಗಬೇಕು ಎಂದರೆ ಜನರಲ್ಲಿ ಜಾಗೃತಿ ಅಗತ್ಯ. ಪೊಲೀಸರು ಎಷ್ಟೇ ಕಷ್ಟ ಪಟ್ಟರೂ, ತಡೆಗೆ ಪ್ರಯತ್ನ ಪಟ್ಟರು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದರೂ ಸೈಬರ್ ಕ್ರೈಮ್ ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಅಗತ್ಯ. ಅಪರಾಧ ಮಾಡಬಾರದು, ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದು ಜನರಲ್ಲಿ ಅರಿವು ಮೂಡಬೇಕು ಎಂದರು. ಎಲ್ಲರೂ ಆರೋಗ್ಯವಂತರಾಗಿ, ಸಮಾಜದ ಆಸ್ತಿಯಾಗಿ ಬಾಳಬೇಕು. ಎಲ್ಲ ಅಪರಾಧಗಳ ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ ಗೋವಿಂದರಾಜು ಹಾಗೂ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

Latest News