ಬೆಂಗಳೂರು, ಮಾ.10- ರಾಜ್ಯ ಸರ್ಕಾರದ ಗ್ಯಾರಂಟಿ ಸಮಾವೇಶಗಳಿಗೆ, ಜಾಹೀರಾತುಗಳಿಗೆ ಮಾಡಿರುವ ಖರ್ಚು ಕುರಿತು ಶ್ವೇತಪತ್ರ ಹೊರಡಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಜಾಹೀರಾತು ಜಾತ್ರೆಗಳಿಗೆ ವರ್ಷದಿಂದ ಎಷ್ಟು ಸಾವಿರ ಕೋಟಿ ರೂ. ಸುರಿದಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ನಾಡಿನ ಜನರ ಮುಂದೆ ಈ ಖರ್ಚಿನ ಲೆಕ್ಕ ಇಡಿ. ಬೇಕಾದರೆ ಗ್ಯಾರಂಟಿ ಪ್ರಚಾರ ಸಮಾವೇಶ ಖರ್ಚು ಬಾಬತ್ತಿನ ಶ್ವೇತಪತ್ರ ಹೊರಡಿಸಿ. ಸರ್ಕಾರದ ಅಸಲಿ ಬಣ್ಣ ಏನೆಂಬುದು ಜನರಿಗೆ ಗೊತ್ತಾಗಲಿ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ. ಒಂದು ವರ್ಷದಿಂದ ನಿಮ್ಮ ಇಡೀ ಸರ್ಕಾರದ ಬದುಕು ಜಾಹೀರಾತು ಮೇಳದಲ್ಲೇ ಮುಗಿದು ಹೋಗಿದೆ. ನಿಮ್ಮ ಹಿಂದೆ ಮುಂದೆ ಸುತ್ತುವ ಪಟಾಲಂನ ಏಜೆನ್ಸಿಗಳ ಮೂಲಕ ಜಾಹೀರಾತು ಜಾತ್ರೆಯನ್ನು ಎಗ್ಗಿಲ್ಲದೆ ಮಾಡುತ್ತಿದ್ದೀರಿ. ಬರದಲ್ಲಿ ಬೆಂದು ಕಣ್ಣೀರು ಹಾಕುತ್ತಿರುವ ಜನರ ಹಣವನ್ನು ಹೀಗೆ ಪ್ರಚಾರಕ್ಕಾಗಿ ಸುರಿಯುತ್ತಿರುವ ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಅವರು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಇತಿಹಾಸದಲ್ಲಿ ಕಂಡು ಕೇಳರಿಯದ ಬರವಿದೆ. ಜಲಕ್ಷಾಮ ಬಿಗಡಾಯಿಸಿದೆ. ಹನಿ ನೀರಿಗೂ ತತ್ವಾರ, ಜನ ಜಾನುವಾರುಗಳ ಹಾಹಾಕಾರ. ಪರಿಸ್ಥಿತಿ ಹೀಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಕೋಟಿ ಕೋಟಿ ರೂ. ಜನರ ತೆರಿಗೆ ಹಣ ಸುರಿದು ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಸಿದ್ದರಾಮಯ್ಯನವರೇ ನಮ್ಮ ನೀರೋ, ರಾಜ್ಯದ ಪಾಲಿನ ಝೀರೋ. ನಿಮಗೆ ಜನರ ಚಿಂತೆ ಇಲ್ಲ, ಚುನಾವಣೆ ಚಿಂತೆಯಷ್ಟೇ. ಆ ಚಿಂತೆಯೇ ನಿಮ್ಮ ಪಕ್ಷ, ಸರ್ಕಾರಕ್ಕೆ ಚಿತೆಯಾಗಲಿದೆ. ಇದು ಜನರೇ ನುಡಿಯುತ್ತಿರುವ ಭವಿಷ್ಯ. ಪ್ರಜೆಗಳ ಮಾತು, ಆ ಪರಮೇಶ್ವರನ ಮಾತು ಒಂದೇ, ಸುಳ್ಳಾಗದು ಎಂದು ಅವರು ಕಟಕಿಯಾಡಿದ್ದಾರೆ.