ಬೆಂಗಳೂರು, ಮಾ.10- ವಿರೋಧ ಪಕ್ಷವಾಗಿರುವ ಬಿಜೆಪಿಯ ನಾಯಕರು ಕಪಟ ನಾಟಕ ಬಿಟ್ಟು ರಾಜ್ಯದ ಬರ ಪರಿಹಾರಕ್ಕೆ ಕೇಂದ್ರದಿಂದ ಮೊದಲು ಹಣ ಕೊಡಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಹೋರಾಟ ಹಮ್ಮಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮಾನ-ಮರ್ಯಾದೆ ಇದ್ದರೆ ಬಿಜೆಪಿಯವರು ಮೊದಲು ಬರ ಪರಿಹಾರಕ್ಕೆ ಹಣ ಕೊಡಿಸಲಿ. ಬರಗಾಲದಂತಹ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಉದ್ಯೋಗವನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವುದು ಕಡ್ಡಾಯ. ಅದಕ್ಕೂ ಅನುಮತಿ ಕೊಡಿಸಲಿ ಎಂದು ಸವಾಲು ಹಾಕಿದರು.
ಬರ ನಿರ್ವಹಣೆ ವಿಚಾರವಾಗಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ವ್ಯಾಪಕವಾಗಿವೆ. ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರತಿದಾಳಿ ಆರಂಭಿಸಿದೆ. ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ ಮಾಡಿದೆ. ಬೆಳೆ ನಷ್ಟಕ್ಕೆ ರೈತರ ಖಾತೆಗಳಿಗೆ ಮೊದಲ ಕಂತಿನ ಪರಿಹಾರವನ್ನಾಗಿ ತಲಾ ಎರಡು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
ಬರದಿಂದಾಗಿ ರಾಜ್ಯದಲ್ಲಿ 35 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ 18 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳೆದ ಸೆಪ್ಟಂಬರ್ 23ರಂದು ಪ್ರಸ್ತಾವನೆ ಸಲ್ಲಿಸಿದೆ. ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೆ ಈವರೆಗೂ ರಾಜ್ಯಕ್ಕೆ ಹಣ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಿಕ್ಕ ಸಿಕ್ಕ ಕಡೆಯಲೆಲ್ಲಾ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯ ಸರ್ಕಾರ ತನ್ನದೇ ಬೊಕ್ಕಸದ ಹಣದಿಂದ ಬರ ನಿರ್ವಹಣೆ ಮಾಡಬೇಕು. ಕೇಂದ್ರ ಸರ್ಕಾರದ ನೆರವು ಕಾಯಬಾರದು ಎಂದು ತಿರುಗೇಟು ನೀಡುತ್ತಿದೆ.
ರಾಜ್ಯದಿಂದ ನೇರ ಹಾಗೂ ಪರೋಕ್ಷ ತೆರಿಗೆ ಮೂಲಗಳಿಂದ ನಾಲ್ಕುವರೆ ಸಾವಿರ ಕೋಟಿ ರೂಪಾಯಿಗಳ ಸಂಪನ್ಮೂಲ ಸಂಗ್ರಹಿಸುತ್ತಿದೆ. ನೂರು ರೂಪಾಯಿಗೆ ಪ್ರತಿಯಾಗಿ 13 ರೂಪಾಯಿ ಮಾತ್ರ ವಾಪಾಸ್ ನೀಡುತ್ತಿದೆ. ಅದನ್ನು ಕನಿಷ್ಠ 50 ರೂಪಾಯಿಗೆ ಹೆಚ್ಚಿಸಬೇಕು ಅಥವಾ ಬರ ನಿರ್ವಹಣಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್ ಸೃಷ್ಟಿಸುತ್ತಿರುವ ಜನಾಭಿಪ್ರಾಯಗಳಿಗೆ ವಿರುದ್ಧವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಡಿ.ಕೆ.ಶಿವಕುಮಾರ ಖಾರವಾಗಿ ಪ್ರತಿಕ್ರಿಯಿಸಿದ್ದು, ಮಾನಮರ್ಯಾದೆ ಇದ್ದರೆ ಕೇಂದ್ರದಿಂದ ಬರ ನಿರ್ವಹಣೆಗೆ ಹಣ ಕೊಡಿಸಲಿ ಎಂದು ಸವಾಲು ಹಾಕಿದ್ದಾರೆ.