Sunday, April 28, 2024
Homeರಾಜ್ಯಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನನ್ನ ಪುತ್ರಿ ಬದಲು ಬೇರೆಯವರು ಸ್ಪರ್ಧಿಸಲಿ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನನ್ನ ಪುತ್ರಿ ಬದಲು ಬೇರೆಯವರು ಸ್ಪರ್ಧಿಸಲಿ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಮಾ.10- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರಿ ಸೌಮ್ಯ ರೆಡ್ಡಿ ಬದಲು, ಬೇರೆಯವರು ಸ್ಪರ್ಧಿಸಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಹಳಷ್ಟು ಮಂದಿ ಪ್ರಬಲ ಅಭ್ಯರ್ಥಿಗಳಿದ್ದಾರೆ. ಅವರಿಗೆ ಅವಕಾಶ ಸಿಗಲಿ. ಹೈಕಮಾಂಡ್ ಯಾರಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಕಾದು ನೋಡುತ್ತಿದ್ದೇವೆ. ನಮ್ಮ ಪುತ್ರಿ ಸೌಮ್ಯ ರೆಡ್ಡಿ ಸ್ರ್ಪಧಿಸುತ್ತಾರೆ ಎಂದು ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಆದರೆ ನಾವು ಹೇಳುತ್ತಿಲ್ಲ. ನಾನು ಸ್ಪರ್ಧೆ ಮಾಡುವ ಇರಾದೆಯೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ನಮ್ಮ ಪಕ್ಷ ಈಗಾಗಲೇ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಬಿಜೆಪಿ ಒಂದು ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ನಮ್ಮಲ್ಲಿ ಕೆಲವು ಕ್ಷೇತ್ರಗಳಿಗೆ ಭಾರೀ ಬೇಡಿಕೆ ಇದೆ, ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಲ್ಲಿ ಅಂತಹ ಒತ್ತಡಗಳಿಲ್ಲ, ಹೆಚ್ಚಿನ ಆಕಾಂಕ್ಷಿಗಳು, ಅಭ್ಯರ್ಥಿಗಳು ಇಲ್ಲ, ಹಾಗಾಗಿ ಅವರು ಒಂದೇ ಕಂತಿನಲ್ಲಿ ಪಟ್ಟಿ ಬಿಡುಗಡೆ ಮಾಡಬಹುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಎಲ್ಲ ಕಡೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮಾರ್ಚ್ 13ರವರೆಗೂ ಅವರ ಪ್ರವಾಸವಿದೆ. ಆ ಬಳಿಕ ಪ್ರಧಾನಿ ಹೇಳಿದ ನಂತರ ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಲಿದೆ. ಆಯೋಗವೂ ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಬರ ನಿರ್ವಹಣೆ ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ಈವರೆಗೂ ಬಿಡಿಗಾಸು ಕೊಟ್ಟಿಲ್ಲ. ಪ್ರಕೃತಿ ವಿಕೋಪ, ಬರ ಹಾಗೂ ನೆರೆ ಸಂದರ್ಭದಲ್ಲಿ ಯಾವ ರೀತಿ ನೆರವು ನೀಡಬೇಕು ಎಂದು ಎನ್‍ಡಿಆರ್‍ಎಫ್ ನಿಯಮಾವಳಿಗಳಲ್ಲಿ ಸ್ಪಷ್ಟ ಮಾರ್ಗಸೂಚಿಗಳಿವೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೇ ಇರುವುದನ್ನು ವಿರೋಧಿಸಿ ಬಿಜೆಪಿಯವರು ದೆಹಲಿಯಲ್ಲಿ ಪ್ರತಿಭಟನೆ ನಡೆಸಬೇಕಿತ್ತು. ಬೆಂಗಳೂರಿನಲ್ಲಿ ಧರಣಿ ನಡೆಸುತ್ತಾರಂತೆ, ಅವರಿಗೆ ನಾಚಿಕೆಯಾಗಬೇಕು ಎಂದರು.

ಬರ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಎನ್‍ಡಿಆರ್‍ಎಫ್ ನಿಯಮಾವಳಿಗಳು ಗೋತ್ತಿಲ್ಲವೇ ? ಬಿಡಿಗಾಸು ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂಬ ಅರಿವಿಲ್ಲವೇ ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು. ಬಿಜೆಪಿಯವರಿಗೆ ರೈತರು. ಮಹಿಳೆಯರು, ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಹಣ ಮತ್ತು ಕುರ್ಚಿ ಎರಡೇ ಮುಖ್ಯ. ಜನರ ಹಿತ ರಕ್ಷಣೆ ಮುಖ್ಯವಲ್ಲ. ವಿಧಾನಸೌಧದ ಮುಂದೆ ಯಾವ ಮುಖ ಇಟ್ಟುಕೊಂಡು ಧರಣಿ ನಡೆಸುತ್ತಾರೆ ಎಂದು ಕಿಡಿಕಾರಿದರು.

ಪ್ರಕೃತಿ ವಿಕೋಪದಿಂದ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಕೇಂದ್ರ ಸರ್ಕಾರದ ರಾಜ್ಯ ವಿರೋಧಿ ನಿಲುವಿನಿಂದ ರಾಜ್ಯದ ಜಲಾಶಯಗಳು ಬರಿದಾಗಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪದೇ ಪದೇ ಆದೇಶ ನೀಡಿ, ತಮಿಳುನಾಡಿಗೆ ನೀರು ಬಿಡಿಸಿತ್ತು. ರಾಜ್ಯದ ಬಿಜೆಪಿ ಸಂಸದರು, ಕೇಂದ್ರ ಸಚಿವರು ಮಧ್ಯ ಪ್ರವೇಶ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ಪ್ರಾಧಿಕಾರ ಆದೇಶ ಕೊಡದಂತೆ ತಡೆಯಬಹುದಿತ್ತು. ಆದರೆ ಆ ರೀತಿ ಮಾಡಲಿಲ್ಲ. ಕೇಂದ್ರದ ಬಳಿ ಅಧಿಕಾರ ಇದ್ದರೂ ರಾಜ್ಯದ ಪರವಾಗಿ ನಿಲುವು ತೆಗೆದುಕೊಳ್ಳಲಿಲ್ಲ. ಬೆಂಗಳೂರಿನ ಲೋಕಸಭಾ ಸದಸ್ಯರು ಬಾಯಿ ಬಿಡಲಿಲ್ಲ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಬೋರ್‍ವೆಲ್‍ಗಳು ಅರ್ಧಕ್ಕರ್ಧ ಬತ್ತಿ ಹೋಗಿವೆ. ದೊಡ್ಡ ಮಳೆ ಬರುವವರೆಗೂ ಬೆಂಗಳೂರಿಗೆ ನೀರಿನ ಸಮಸ್ಯೆ ತಪ್ಪುವುದಿಲ್ಲ. ಆದರೂ ನಮ್ಮ ಸರ್ಕಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಪಾಲಿಕೆ ಎಲ್ಲಾ ಟ್ಯಾಂಕರ್‍ಗಳನ್ನು ಬಾಡಿಗೆ ಪಡೆದು ಜನರಿಗೆ ನೀರು ಪೂರೈಸುತ್ತಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆಯನ್ನು ನಮ್ಮ ಸರ್ಕಾರವಾಗಿರುವುದಕ್ಕೆ ಇಷ್ಟರ ಮಟ್ಟಿಗೆ ನಿಭಾಯಿಸುತ್ತಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದರೆ ಓಡಿ ಹೋಗುತ್ತಿದ್ದರು. ಈ ಹಿಂದೆ ಬೆಂಗಳೂರಿನಲ್ಲಿ ತಾಜ್ಯ ವಿಲೇವಾರಿ ಸಮಸ್ಯೆ ಎದುರಾದಾಗ ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ನಗರದಲ್ಲಿ ಹತ್ತು ಅಡಿ ವರೆಗೂ ಕಸದ ರಾಶಿ ಬಿದ್ದಿದ್ದನ್ನು ನೋಡಿದ್ದೇವೆ. ಇನ್ನೂ ರಸ್ತೆಯಲ್ಲಿ ಲಕ್ಷಗಟ್ಟಲೇ ಗುಂಡಿಗಳಿದ್ದವು.

ಇವರ ಕೈನಲ್ಲಿ ನಿರ್ವಹಣೆ ಮಾಡಲಾಗಲ್ಲಿಲ. ಕೊನೆಗೆ ಹೈಕೋರ್ಟ್ ಜವಾಬ್ದಾರಿ ತೆಗೆದುಕೊಂಡು ರಸ್ತೆಗುಂಡಿಗಳನ್ನು ಮುಚ್ಚಿಸಿತ್ತು. ಹೈಕೋರ್ಟ್‍ಗೆ ಇದೇನಾ ಕೆಲಸ, ಸರ್ಕಾರ ಸಮರ್ಥವಾಗಿದ್ದರೆ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಹಿಂದಿನ ಸರ್ಕಾರದಲ್ಲಿ ಎಲ್ಲವನ್ನೂ ನ್ಯಾಯಾಲಯವೇ ಮುಂದೆ ನಿಂತು ನಿರ್ವಹಣೆ ಮಾಡಬೇಕಿತ್ತು ಎಂದರು.

ಈಗಲೂ ರಾಜ್ಯದ ಬರ ನಿರ್ವಹಣೆಗೆ ಹಣ ಕೊಡಿಸಲು ಬಿಜೆಪಿಯ ದೊಡ್ಡ ದೊಡ್ಡ ನಾಯಕು ಬಾಯಿ ಬಿಡುತ್ತಿಲ್ಲ. 25 ಜನ ಎಂಪಿಗಳು, ಪ್ರಹ್ಲಾದ್ ಜೋಶಿಯವರಂತಹ ಕೇಂದ್ರ ಸಚಿವರು ಇದ್ದರೂ ಏಕೆ ಹಣ ಸಿಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದರೆ ನಮ್ಮ ರಾಜ್ಯದ ನಾಯಕರು ನಡುಗುತ್ತಾರೆ. ಇಂತಹವರ ಕೈನಲ್ಲಿ ಅಕಾರ ಕೊಟ್ಟರೆ ರಾಜ್ಯ ಮತ್ತು ದೇಶ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.

ನಿಗಮ ಮಂಡಳಿಗಳಿಗೆ ಪ್ರಮುಖ ಕಾರ್ಯಕರ್ತರನ್ನು ಈಗಾಗಲೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ, ಇನ್ನೂ ಸದಸ್ಯರನ್ನು ನೇಮಿಸಬೇಕಿದೆ. ಅದಕ್ಕಾಗಿ ಬೆಂಗಳೂರು ನಗರದ ಕಾರ್ಯಕರ್ತರ ಪಟ್ಟಿ ನೀಡುವ ಸಲುವಾಗಿ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದೇನೆ. ಮತ್ತೊಂದು ಕಾರಣವೆಂದರೆ ನಮ್ಮ ಪಕ್ಷದ ಪುಟ್ಟಣ್ಣ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗೆಲುವಿಗಾಗಿ ಮತದಾರರನ್ನು ಅಭಿನಂದಿಸಲು ಉಪಮುಖ್ಯಮಂತ್ರಿ ಮತ್ತು ತಾವು ಜೊತೆಯಲ್ಲೇ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ ಎಂದರು.

RELATED ARTICLES

Latest News