Saturday, April 27, 2024
Homeರಾಜ್ಯಶೋಭಕ್ಕ ಕಳಿಸಿ, ಬಿಜೆಪಿ ಉಳಿಸಿ : ಚುನಾವಣಾ ಸಮಿತಿ ಸದಸ್ಯರ ಎದುರೇ ಕಾರ್ಯಕರ್ತರ ಘೋಷಣೆ

ಶೋಭಕ್ಕ ಕಳಿಸಿ, ಬಿಜೆಪಿ ಉಳಿಸಿ : ಚುನಾವಣಾ ಸಮಿತಿ ಸದಸ್ಯರ ಎದುರೇ ಕಾರ್ಯಕರ್ತರ ಘೋಷಣೆ

ಬೆಂಗಳೂರು,ಮಾ.10- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲೇಬಾರದು ಎಂದು ಒತ್ತಾಯಿಸಿ ಪಕ್ಷದ ಕಚೇರಿಯಲ್ಲೇ ನೂರಾರು ಕಾರ್ಯಕರ್ತರು, ಬಿಜೆಪಿ ಉಳಿಸಿ, ಶೋಭಕ್ಕನ ಕಳುಹಿಸಿ ಎಂಬ ಅಭಿಯಾನವನ್ನು ಚುನಾವಣಾ ಸಮಿತಿ ಸದಸ್ಯರ ಎದುರೇ ನಡೆಸಿದ್ದಾರೆ. ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಮಿತಿಯ ಸದಸ್ಯರ ಸಭೆಯನ್ನು ಕರೆಯಲಾಗಿತ್ತು. ಸಮಿತಿ ಸದಸ್ಯರಾದ ಆರಗ ಜ್ಞಾನೇಂದ್ರ, ಭಾನುಪ್ರಕಾಶ್ ಅವರು ಬಿಜೆಪಿ ಕಚೇರಿಗೆ ಬರುತ್ತಿದ್ದಂತೆ ನೂರಾರು ಕಾರ್ಯಕರ್ತರು ಜಮಾಯಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಶೋಭಕ್ಕ ಕಳುಹಿಸಿ-ಬಿಜೆಪಿ ಉಳಿಸಿ, ಬೇಡವೇ ಬೇಡ ಶೋಭಕ್ಕ ಬೇಡ ಎಂದು ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಸ್ಥಳೀಯರಿಗೆ ಮಾತ್ರ ಟಿಕೆಟ್ ಕೊಟ್ಟರೆ ನಾವು ಈ ಬಾರಿ ಮತ ಹಾಕುತ್ತೇವೆ. ಇಲ್ಲದಿದ್ದರೆ ಮತದಾನ ದಿನ ಎಲ್ಲರೂ ಮತ ಹಾಕದೆ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದರು.

ಶೋಭ ಕರಂದ್ಲಾಜೆ ಮೂಲತಃ ದಕ್ಷಿಣಕನ್ನಡದವರು. ಉಡುಪಿ-ಚಿಕ್ಕಮಗಳೂರಿಗೂ ಅವರಿಗೂ ಸಂಬಂಧವೇ ಇಲ್ಲ. ಯಾವ ಕಾರಣಕ್ಕಾಗಿ ಅವರಿಗೆ ಟಿಕೆಟ್ ನೀಡುತ್ತಿದ್ದೀರಿ? ಗೆದ್ದ ಮೇಲೆ ಕ್ಷೇತ್ರದ ಕಡೆ ತಲೆಯನ್ನೇ ಹಾಕಿಲ್ಲ. ಈ ಹಿಂದೆ ಅತಿವೃಷ್ಟಿ ಉಂಟಾದಾಗ ಹಾಗೂ ಪ್ರಸ್ತುತ ಬರಗಾಲ ಬಂದರೂ ಸಂಕಷ್ಟದಲ್ಲಿರುವ ಸಂತ್ರಸ್ತರನ್ನು ಭೇಟಿ ಮಾಡಿಲ್ಲ ಎಂದು ಹರಿಹಾಯ್ದರು.

ಯಾರನ್ನು ಕೇಳಿ ಶೋಭಾ ಅವರ ಹೆಸರನ್ನು ಈ ಕ್ಷೇತ್ರಕ್ಕೆ ಅಂತಿಮ ಮಾಡಿದ್ದಾರೆ. ಉಡುಪಿಯಲ್ಲಿ ಐದು ಶಾಸಕರು ಇದ್ದಾರೆ. ಚಿಕ್ಕಮಗಳೂರಿನಲ್ಲಿ ನಾವು ಕಳೆದ ವಿಧಾನಸಭೆ ಚುನಾವಣೆಯಲ್ಲಿ 5 ಕ್ಷೇತ್ರವನ್ನು ಕಳೆದುಕೊಂಡೆವು. ಕಾಂಗ್ರೆಸ್ ಜೊತೆ ಸೇರಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನೇ ಅವರು ಸೋಲಿಸಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಒಂದು ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧವೂ ಹರಿಹಾಯ್ದ ಕಾರ್ಯಕರ್ತರು, ಶೋಭ ಹೆಸರನ್ನು ಅಂತಿಮಗೊಳಿಸುವ ಮುನ್ನ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತಲ್ಲವೇ? ಒಂದು ವೇಳೆ ನಮ್ಮ ವಿರೋಧ ಕಟ್ಟಿಕೊಂಡು ಶೋಭ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

RELATED ARTICLES

Latest News