Thursday, May 9, 2024
Homeರಾಷ್ಟ್ರೀಯಬಿಎಎಂಎಲ್‍ನಲ್ಲಿ ಸಿದ್ದವಾಗುತ್ತಿವೆ ವಂದೇ ಭಾರತ್ ಸ್ಲೀಪರ್ ಕ್ಲಾಸ್ ಬೋಗಿಗಳು

ಬಿಎಎಂಎಲ್‍ನಲ್ಲಿ ಸಿದ್ದವಾಗುತ್ತಿವೆ ವಂದೇ ಭಾರತ್ ಸ್ಲೀಪರ್ ಕ್ಲಾಸ್ ಬೋಗಿಗಳು

ಬೆಂಗಳೂರು,ಮಾ.10- ಅತ್ಯಾಧುನಿಕ ಸೌಲಭ್ಯದ ವಂದೇ ಭಾರತ್ ಸ್ಲೀಪರ್ ಕ್ಲಾಸ್ ಬೋಗಿಗಳ ನಿರ್ಮಾಣ ಕಾರ್ಯ ಬಿಇಎಂಎಲ್ ಸಂಸ್ಥೆಯಲಿ ಭರದಿಂದ ಸಾಗುತ್ತಿದ್ದು, ಆರು ತಿಂಗಳಲ್ಲಿ ರೈಲು ಸಂಚಾರಕ್ಕೆ ಸಿದ್ಧವಾಗಲಿದೆ. ನಿನ್ನೆ ವಂದೇ ಭಾರತ್ ಸ್ಲೀಪರ್ ರೈಲಿನ ಬೋಗಿಯ ಒಳವಿನ್ಯಾಸ ನಿರ್ಮಾಣ ಹಂತವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದ್ದರು. ವಂದೇ ಭಾರತ್ (ಚೇರ್‍ಕಾರ್), ನಮೋ ಭಾರತ್ ( ರ್ಯಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಂ) ಹಾಗೂ ಅಮೃತ್ ಭಾರತ್ ( ಪುಶ್‍ಪುಲ್ ಟೆಕ್ನಾಲಜಿ) ರೈಲುಗಳ ಯಶಸ್ಸಿನ ಬಳಿಕ ಇದೀಗ ವಂದೇ ಭಾರತ್ ಸರಣಿಯ ಸ್ಲೀಪರ್ ರೈಲು ಶೀಘ್ರವೇ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ವಂದೇ ಭಾರತ್ ಸ್ಲೀಪರ್ ಕ್ಲಾಸ್ ಬೋಗಿಗಳು ನಗರದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‍ನಲ್ಲಿ ನಿರ್ಮಾಣವಾಗುತ್ತಿವೆ. 16 ಬೋಗಿಯ ರೈಲು ಇದಾಗಿದೆ. ಒಂದು ಬೋಗಿಯಲ್ಲಿ ಕನಿಷ್ಠ 67 ಜನ ಪ್ರಯಾಣಿಸಬಹುದಾಗಿದೆ. ಎಸಿ 3 ಟೈರ್ ಬರ್ತ್ ಗಳ 11 ಬೋಗಿ ಇದರಲ್ಲಿ 611 ಆಸನ ಇರಲಿದೆ. ಎಸಿ 2 ಟೈರ್ ಬರ್ತ್ ಗಳ 4 ಬೋಗಿ ನಿರ್ಮಾಣವಾಗುತ್ತಿದ್ದು 188 ಆಸನ ವ್ಯವಸ್ಥೆ ಇರಲಿದೆ. ಮೊದಲ ದರ್ಜೆ ಎಸಿ ಬರ್ತ್ 1 ಬೋಗಿಯಲ್ಲಿ 24 ಆಸನ ಇರಲಿದೆ.

ಸಂಪೂರ್ಣ ಹೊಸ ವಿನ್ಯಾಸದಲ್ಲಿ ಈ ರೈಲು ನಿರ್ಮಾಣ ಆಗುತ್ತಿದ್ದು, ರೈಲಿನ ನಿರ್ಮಾಣ ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದ್ದು, ನಾಲ್ಕರಿಂದ ಆರು ತಿಂಗಳ ಕಾಲ ವಿವಿಧ ರೀತಿಯ ತಪಾಸಣೆಗೆ ಒಳಪಡಲಿದೆ. ಬಳಿಕ ಅಗತ್ಯ ಬದಲಾವಣೆ ಜೊತೆಗೆ ಇನ್ನಷ್ಟು ರೈಲುಗಳು ನಿರ್ಮಾಣ ಆಗಲಿವೆ. ಬಿಇಎಂಎಲ್ 10 ರೈಲುಗಳನ್ನು (160 ಬೋಗಿ) ನಿರ್ಮಿಸಿ ಕೊಡಲಿದೆ. ಈಗಿನ ವಂದೇ ಭಾರತ್‍ಗಿಂತಲೂ ವಿಶೇಷ ಸೌಲಭ್ಯಗಳನ್ನು ಸ್ಲೀಪರ್ ರೈಲು ಹೊಂದಿರಲಿದೆ.

ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಸನಗಳ ಎತ್ತರ ವಿನ್ಯಾಸ ಮಾಡಲಾಗಿದೆ. ಕೇಂದ್ರಿತ ಹವಾನಿಯಂತ್ರಣ ವ್ಯವಸ್ಥೆ, ವೈರಸ್ ನಿಯಂತ್ರಣ ಮೆಕ್ಯಾನಿಸಂ ಇರಲಿದೆ. ತೀರಾ ಕಡಿಮೆ ಅಲುಗಾಟ ಹಾಗೂ ಕಂಪನ ವ್ಯವಸ್ಥೆ ಇರುವುದರಿಂದ ಜನ ಆರಾಮವಾಗಿ ನಿದ್ರಿಸಿ ಪ್ರಯಾಣಿಸಬಹುದು. ವಂದೇ ಭಾರತ್ ಸರಣಿಯ ಇತರೆ ರೈಲುಗಳ ಪ್ರಯಾಣಿಕರಿಂದ ಬಂದ ಎಲ್ಲ ಪ್ರತಿಕ್ರಿಯೆ ಪಡೆದು ಆ ಸಮಸ್ಯೆಗಳನ್ನು ಈ ರೈಲಿನಲ್ಲಿ ನಿವಾರಿಸಲಾಗುತ್ತಿದೆ.

ಅಗ್ನಿ ಅವಘಡ ನಿಯಂತ್ರಣ ಸೇರಿದಂತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಳಬಾಗಿಲುಗಳಿಗೆ ಸೆನ್ಸಾರ್ ಅಳವಡಿಕೆ, ವಾಸನೆ ಮುಕ್ತ ಶೌಚಾಲಯ, ಚಾಲನಾ ವಿಭಾಗದಲ್ಲಿ ಶೌಚಾಲಯ ಇರಲಿದೆ. ಮೊದಲ ದರ್ಜೆ ಎಸಿಕಾರ್‍ನಲ್ಲಿ ಬಿಸಿ ನೀರಿನ ಶವರ್ , ಯುಎಸ್‍ಬಿ ಚಾರ್ಜಿಂಗ್, ದೃಶ್ಯ ಮಾಹಿತಿ ಸೌಲಭ್ಯ ಇರಲಿದೆ.

ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಈ ರೈಲು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ನಮ್ಮಲ್ಲೇ ಮೆಟ್ರೋ ರೈಲಿನ ಒಂದು ಬೋಗಿಗೆ 9 ರಿಂದ 10 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ವಂದೇ ಭಾರತ್ ಸ್ಲೀಪರ್ ಬೋಗಿಗೆ ಅಂದಾಜು 8 ರಿಂದ 9 ಕೋಟಿ ತಗಲುತ್ತಿದೆ. ವಿನ್ಯಾಸ ದೇಸಿಯ ಮಟ್ಟದಲ್ಲೇ ನಿರ್ಮಾಣ ಆಗುತ್ತಿರುವ ಕಾರಣ ಕಡಿಮೆ ವೆಚ್ಚದಾಯಕವಾಗಿದೆ.

ಸದ್ಯ ಬೆಂಗಳೂರು ಮಾಲ್ಡಾ ನಡುವೆ ಸಂಚರಿಸುತ್ತಿರುವ ಅಮೃತ್ ಭಾರತ್ ರೈಲು ಶೇ. 100 ಭರ್ತಿಯಾಗುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲ ಬದಲಾವಣೆ ಜೊತೆಗೆ ಇನ್ನೂ 100 ಅಮೃತ್ ಭಾರತ್ ರೈಲು ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ಬಿಎಇಎಂಎಲ್ ವ್ಯವಸ್ಥಾಪಕ ನಿರ್ದೇಶಕ ಶಂತನು ರಾಯ್ ಹೇಳಿದ್ದಾರೆ.

ವಂದೇ ಭಾರತ್ ಸ್ಲೀಪರ್ ಕೋಚ್ ಪ್ರಯಾಣದ ಸಮಯವನ್ನು ಕಡಿಮೆ ಮಾಡಿ, ವಿಶ್ವ ದರ್ಜೆಯ ಸೌಲಭ್ಯಗಳನ್ನು ಸುಗಮಗೊಳಿಸಲಿದೆ. ಈ ಮೈಲಿಗಲ್ಲನ್ನು ತಲುಪುತ್ತಿರುವುದಕ್ಕೆ ಸಂತೋಷಪಡುತ್ತೇವೆ ಎಂದಿದ್ದಾರೆ. ನಮ್ಮ ಉತ್ಪಾದನೆ ಪೂರ್ಣ ಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ, ವಂದೇ ಭಾರತ್ ಸ್ಲೀಪರ್ ರೈಲುಗಳು ಪ್ರಯಾಣಿಕರ ಸೌಕರ್ಯ ಮತ್ತು ಅನುಕೂಲತೆಯಲ್ಲಿ ಹೊಸ ಮಾನದಂಡವನ್ನು ಹೊಂದಲಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News