Homeರಾಜ್ಯಚಿಕ್ಕಬಾಣಾವರದಲ್ಲಿ ತಂದೆ-ಮಗ ಅನುಮಾನಾಸ್ಪದ ಸಾವು, ಕೊಲೆ ಶಂಕೆ

ಚಿಕ್ಕಬಾಣಾವರದಲ್ಲಿ ತಂದೆ-ಮಗ ಅನುಮಾನಾಸ್ಪದ ಸಾವು, ಕೊಲೆ ಶಂಕೆ

Father-son suspicious death in Chikkabanavara

ಬೆಂಗಳೂರು,ಆ.17- ನಗರದ ಚಿಕ್ಕಬಾಣಾವರ ಗುಟ್ಟೆ ಬಸವೇಶ್ವರ ಲೇಔಟ್‌ನಲ್ಲಿ ತಂದೆ-ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾತ್ರಿ ನಡೆದಿದೆ. ಮೃತರನ್ನು ಅಭಿನಂದನ್‌ (38) ಹಾಗೂ ಅವರ ಐದು ವರ್ಷದ ಪುತ್ರ ಯದುವೀರ್‌ ಎಂದು ಗುರುತಿಸ ಲಾಗಿದೆ. ಇವರು ಮೂಲತಃ ಕುಣಿಗಲ್‌ ನವರು. ಎಲೆಕ್ಟ್ರಾನಿಕ್‌ ಸಿಟಿಯ ಎಂಎನ್‌ಸಿ ಕಂಪನಿಯೊಂದರಲ್ಲಿ ಅಭಿನಂದನ್‌ ಕೆಲಸ ಮಾಡುತ್ತಿದ್ದರು.

ಅವರ ಪತ್ನಿ ಹರಿಣಿ ಗೃಹಿಣಿ. ರಾತ್ರಿ ಪತಿ-ಪತ್ನಿ ನಡುವೆ ಗಲಾಟೆ ನಡೆದಿದ್ದು ಬಳಿಕಾ ಬೇರೆ ಬೇರೆ ಕೊಠಡಿಯಲ್ಲಿ ಮಲಗಿದ್ದರು ಎನ್ನಲಾಗಿದೆ.ಆದರೆ ಬೆಳಗ್ಗೆ ಎದ್ದು ನೋಡಿದಾಗ ಅಭಿನಂದನ್‌ ಹಾಗೂ ಪುತ್ರ ಯದು ವೀರ್‌ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ.

ಅಭಿನಂದನ್‌ ಮುಖದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಕಿವಿಯಿಂದ ರಕ್ತ ಸೋರಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಘಟನೆಗೆ ಸಂಬಂಧಿಸಿದಂತೆ ಅಭಿನಂದನ್‌ ಪತ್ನಿ ಹರಿಣಿಯನ್ನು ಚಿಕ್ಕಬಾಣಾವರ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ತನಿಖೆ ವೇಳೆ ಪೊಲೀಸರಿಗೆ ಹಲವಾರು ಅನುಮಾನ ಮೂಡಿದ್ದು, ಸದ್ಯ ಪತಿ-ಪತ್ನಿಯ ಇಬ್ಬರ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದು, ಕರೆಗಳ ಮಾಹಿತಿ ಹಾಗೂ ಇತರೆ ವಿವರಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಗಲಾಟೆಯ ಬಳಿಕ ನಡೆದ ಘಟನೆ ಹಿನ್ನೆಲೆಯಲ್ಲಿ ಪತ್ನಿಯಿಂದಲೇ ಕೃತ್ಯ ನಡೆದಿರಬಹುದೇ ಎಂಬ ಅನುಮಾನವೂ ಸಹ ಪೊಲೀಸರಿಗೆ ಮೂಡಿ ಬಂದಿದೆ.ತಂದೆ-ಮಗನ ಸಾವು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆಯ ಬಳಿಕ ಹಾಗೂ ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

ಸುದ್ದಿ ತಿಳಿದು ಚಿಕ್ಕಬಾಣಾವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News