ನವದೆಹಲಿ,ಮಾ.11- ಕೆಲವು ತಿಂಗಳುಗಳ ಹಿಂದೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯಾದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) CAR-T ಸೆಲ್ ಥೆರಪಿಯ ವಾಣಿಜ್ಯದ ಬಳಕೆಗೆ ಅನುಮೋದನೆ ನೀಡಿತು. ಈ ಚಿಕಿತ್ಸೆಯು ಕ್ಯಾನ್ಸರ್ ವಿರುದ್ಧ ಹೋರಾಡಲು ರೋಗಿಯ ರೋಗ ಪ್ರತಿರೋಧಕ ಶಕ್ತಿಯ ವಂಶವಾಹಿ ಪುನಶ್ಚೇತನಕ್ಕೆ ಒತ್ತು ನೀಡುತ್ತದೆ. ಇಂದು ಈ ಚಿಕಿತ್ಸೆ ಅನೇಕ ರೋಗಿಗಳ ಪಾಲಿಗೆ ಜೀವರಕ್ಷಕವಾಗಿ ಪರಿಣಮಿಸಿದೆ.
ಈ ಚಿಕಿತ್ಸೆಯಿಂದ ಪ್ರಾಣ ಉಳಿಸಿಕೊಂಡವರಲ್ಲಿ ದೆಹಲಿ ಮೂಲದ ಗ್ಯಾಸ್ಟ್ರೊಎಂಟರಾಲಜಿಸ್ಟ್, ಭಾರತೀಯ ಸೇನೆಯಲ್ಲಿ 28 ವರ್ಷಗಳಿಗೂ ಅಧಿಕ ಸೇವಾನುಭವ ಹೊಂದಿರುವ ಡಾ(ಕರ್ನಲ್) ವಿ.ಕೆ.ಗುಪ್ತಾ ಅವರು ಸೇರಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅವರು ಕೇವಲ 42 ಲಕ್ಷ ರೂ.ಗಳು ಅಥವಾ 50,000 ಅಮೆರಿಕನ್ ಡಾಲರ್‍ಗಳನ್ನು ಪಾವತಿಸಿ ಈ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹೊರದೇಶಗಳಲ್ಲಿ ಈ ಚಿಕಿತ್ಸೆಗೆ 4 ಕೋಟಿ ರೂ.ಗಳು ಅಥವಾ 480,000 ಅಮೆರಿಕನ್ ಡಾಲರ್‍ಗಳಷ್ಟು ವೆಚ್ಚವಾಗುತ್ತದೆ. ಡಾ.ಗುಪ್ತಾ ಅವರು ಚಿಕಿತ್ಸೆ ಪಡೆದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯರು ಈಗ ಗುಪ್ತಾ ಅವರು ಕ್ಯಾನ್ಸರ್ ಕೋಶಗಳಿಂದ ಮುಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಗುಪ್ತಾ ಅವರು ಹೀಗೆ ಈ ಚಿಕಿತ್ಸೆಯಿಂದ ಪೂರ್ಣ ಗುಣಮುಖರಾದ ಮೊದಲ ರೋಗಿ. ಕೆಲವು ವರ್ಷಗಳ ಹಿಂದೆ ಇದು ಸಾಧ್ಯವಾದೀತೆಂದು ಅವರು ಕನಸನ್ನಷ್ಟೇ ಕಾಣಬಹುದಾಗಿತ್ತು.
ಈ ಚಿಕಿತ್ಸೆ ಜೀವಮಾನ ಪೂರ್ತಿ ರಕ್ಷಣೆ ಕೊಡುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲವಾದರೂ ರೋಗಿ ಈಗ ಕ್ಯಾನ್ಸರ್ ಸೆಲ್‍ಗಳಿಂದ ಮುಕ್ತರಾಗಿದ್ದಾರೆ ಎಂದು ಡಾ.ಗುಪ್ತಾ ಅವರಿಗೆ ಈ ಚಿಕಿತ್ಸೆ ನೀಡಿದ ಹೆಮಟೋ ಆಂಕಾಲಜಿಸ್ಟ್ ಮತ್ತು ಟಾಟಾ ಮೆಮೋರಿಯಲ್ ಸೆಂಟರ್ ನ ಅಡ್ವಾನ್ಸ್ಡ್ ಸೆಂಟರ್ ಫಾರ್ ಟ್ರೀಟ್‍ಮೆಂಟ್, ರಿಸರ್ಚ್ ಆ್ಯಂಡ್ ಎಜುಕೇಷನ್ ಇನ್ ಕ್ಯಾನ್ಸರ್(ಎಸಿಟಿಆರ್‍ಇಸಿ)ನ ಡಾ.ಹಸಮುಖ್ ಜೈನ್ ಅವರು ಹೇಳಿದ್ದಾರೆ.
ಹೀಗಿದ್ದರೂ ಚಿಕಿತ್ಸೆಯ ಯಶಸ್ಸಿನ ದರದ ಕುರಿತು ಈಗಲೇ ಏನನ್ನೂ ಹೇಳಲಾಗುವುದಿಲ್ಲ. ಆದಾಗ್ಯೂ ಆರಂಭಿಕ ಶೋಧನೆಗಳು, ರೋಗಿಗಳು ಬದುಕುಳಿಯುವ ಉತ್ತಮ ಸಾಧ್ಯತೆಗಳು ಮತ್ತು ರೋಗ ಮರುಕಳಿಸುವ ಕಡಿಮೆ ಸಂಭವವನೀಯತೆಯನ್ನು ತೋರಿಸಿವೆ ಎಂದು ವೈದ್ಯ ಜೈನ್ ವಿವರಿಸಿದ್ದಾರೆ.
ಆರಂಭಿಕ ಹಂತದ ಕ್ಯಾನ್ಸರ್ ರೋಗಿಗಳಿಗೆ ರೋಗ ಉಲ್ಬಣವಾಗದಂತೆ ಈ ಚಿಕಿತ್ಸೆ ತಡೆಯಬಲ್ಲದು ಎಂದು ಅವರು ನುಡಿದಿದ್ದಾರೆ. ರೋಗಿಗಳಲ್ಲಿ ರೋಗ ಮರುಕಳಿಕೆಯ ಸಾಧ್ಯತೆಗಳನ್ನು ಗುರುತಿಸಲು ಡಾ.ಜೈನ್ ಪ್ರತಿಪಾದಿಸಿದ್ದಾರೆ. ಎನ್‍ಇಎಕ್ಸ್ ಸಿಆರ್‍ಟಿ19 ಎಂಬ ಈ ಚಿಕಿತ್ಸೆಯನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಡೆಕ್ನಾಲಜಿ ಬಾಂಬ್(ಐಐ-ಟಿಬಿ) ಮತ್ತು ಟಾಟಾ ಮೆಮೋರಿಯಲ್ ಹಾಸ್ಪಿಟಲ್‍ನ ಆಶ್ರಯದಲ್ಲಿರುವ ಇಮ್ಯುನೋ ಆ್ಯಕ್ಟ್ ಎಂಬ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಬಿ-ಸೆಲ್ ಕ್ಯಾನ್ಸರ್‍ಗಳು ವಿಶೇಷವಾಗಿ ಲ್ಯೂಕೇಮಿಯಾ ಮತ್ತು ಲಿಂಫೋಮಾಗಳಂತಹ ರೋಗ ಪ್ರತಿರೋಧಕ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‍ಗಳ ಚಿಕಿತ್ಸೆಯಲ್ಲಿ ಸಹಕಾರಿಯಾಗಲಿದೆ.
ಸಿಡಿಎಸ್‍ಸಿಒ 2023ರ ಅಕ್ಟೋಬರ್‍ನಲ್ಲಿ ಇದರ ವಾಣಿಜ್ಯ ಬಳಕೆಗೆ ಅನುಮೋದನೆ ನೀಡಿತು. ಇಂದು ಈ ಚಿಕಿತ್ಸೆ ಭಾರತದ 10ಕ್ಕೂ ಅಕ ನಗರಗಳ 30ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಲಭ್ಯ. ಬಿ-ಸೆಲ್ ಕ್ಯಾನ್ಸರ್‍ಗಳಿಂದ ಬಳಲುತ್ತಿರುವ 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ರೋಗಿಗಳು ಈ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ ಎಂದು ಡಾ.ಜೈನ್ ನುಡಿದಿದ್ದಾರೆ.