Thursday, May 2, 2024
Homeರಾಜ್ಯಬಿಜೆಪಿ ರಾಷ್ಟ್ರೀಯ ನಾಯಕರ ಜೊತೆಗೆ ಎಚ್‍ಡಿಕೆ ಮಹತ್ವದ ಮಾತುಕತೆ

ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆಗೆ ಎಚ್‍ಡಿಕೆ ಮಹತ್ವದ ಮಾತುಕತೆ

ಬೆಂಗಳೂರು,ಮಾ.11- ಲೋಕಸಭಾ ಚುನಾವಣೆ ಕ್ಷೇತ್ರ ಹಂಚಿಕೆ, ಕಾರ್ಯತಂತ್ರ, ಪ್ರಚಾರ, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಾಳೆ ನವದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಕ್ಷೇತ್ರ ಹಂಚಿಕೆ ವಿಚಾರವನ್ನು ಮಾತುಕತೆ ಸಂದರ್ಭದಲ್ಲಿ ಅಂತಿಮಗೊಳಿಸಲಿದ್ದಾರೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‍ಗೆ ನಾಲ್ಕು ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಡಲಿದೆ ಎಂದು ಹೇಳಲಾಗುತ್ತಿದೆ. ಹಾಸನ, ಮಂಡ್ಯ, ಕೋಲಾರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಈಗಾಗಲೇ ಸಮ್ಮತಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ತುಮಕೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಜೆಪಿ ಬಿಟ್ಟುಕೊಡುವ ನಿರೀಕ್ಷೆ ಇದೆ ಎನ್ನಲಾಗಿದೆ.

ಇಂದು ನವದೆಹಲಿಯಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗುವ ಸಾಧ್ಯತೆಯಿದ್ದು, ಇದಾದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ನಾಯಕರು ಕುಮಾರಸ್ವಾಮಿಯವರಿಗೆ ಮಾತುಕತೆಗೆ ಆಹ್ವಾನ ನೀಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳಿವೆ. ಈಗಾಗಲೇ ಕುಮಾರಸ್ವಾಮಿಯವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ.

ಈ ಬಾರಿ ಚುನಾವಣಾ ಪೂರ್ವ ಮೈತ್ರಿ ವಿಚಾರ ಅಂತಿಮಗೊಳ್ಳಲಿದೆ. ಉಭಯ ಪಕ್ಷಗಳ ಅಭ್ಯರ್ಥಿ ಆಯ್ಕೆ ವಿಚಾರ, ಎನ್‍ಡಿಎ ಅಭ್ಯರ್ಥಿಗಳ ಪರವಾಗಿ ಜಂಟಿ ಪ್ರಚಾರ, ಕಾಂಗ್ರೆಸ್ ಮಣಿಸಲು ಉಭಯ ಪಕ್ಷಗಳು ಕೈಗೊಳ್ಳಬೇಕಿರುವ ಕಾರ್ಯತಂತ್ರ ಮೊದಲಾದ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿ ಸಲಹೆ ಸೂಚನೆಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬಳಿಕ ರಾಜ್ಯದಲ್ಲಿ ಪಕ್ಷದ ವತಿಯಿಂದ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಕುಮಾರಸ್ವಾಮಿ ಪ್ರಕಟಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿಯೊಂದಿಗಿನ ಕ್ಷೇತ್ರ ಹಂಚಿಕೆಗೆ ಸಂಬಂಧಿಸಿದ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಕುಮಾರಸ್ವಾಮಿಯವರಿಗೆ ವಹಿಸಿದ್ದಾರೆ.

ಅದರಂತೆ ಕುಮಾರಸ್ವಾಮಿ ಈಗಾಗಲೇ ಕ್ಷೇತ್ರವಾರು ಪಕ್ಷದ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ಚುನಾವಣಾ ಪೂರ್ವ ತಯಾರಿ ಸಂದರ್ಭದಲ್ಲಿ ವ್ಯಕ್ತವಾದ ಅಭಿಪ್ರಾಯದ ಸಾರಾಂಶವನ್ನು ಬಿಜೆಪಿ ನಾಯಕರ ಗಮನಕ್ಕೂ ತರಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

RELATED ARTICLES

Latest News