ಬೆಂಗಳೂರು,ಆ.18- ಚಿನ್ನ ನಿರಂತರ ಏರುಗತಿಯಲ್ಲಿ ಸಾಗುತ್ತಿದ್ದರೆ, ಬೆಳ್ಳಿ ಸ್ಥಿರವಾಗಿದೆ. ಕಳೆದ ಎರಡು ವಾರಗಳಲ್ಲಿ ಚಿನ್ನ ಒಂದು ಗ್ರಾಂಗೆ 1 ಸಾವಿರ ರೂ.ಗೂ ಹೆಚ್ಚು ಏರಿಕೆಯಾಗಿದೆ.
ಜುಲೈನಲ್ಲಿ ಪದೇಪದೇ ಏರಿಳಿತವಾಗಿ ಇಳಿಮುಖದ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿದರಗಳು ಆಗಸ್ಟ್ನಲ್ಲಿ ಚೇತರಿಕೆ ಕಂಡಿವೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಆ.11 ರಿಂದ ಚಿನ್ನ ನಿರಂತರವಾಗಿ ಏರುತ್ತಲೇ ಇದೆ. ಆದರೆ ಆ.13 ರಂದು ಮಾತ್ರ ಅಲ್ಪಪ್ರಮಾಣದ ಕುಸಿತ ಕಂಡಿದ್ದು ಮತ್ತೆ ಆ.14 ರಿಂದ ಚಿನ್ನ ಏರಿಕೆಯಾಗುತ್ತಲೇ ಇದೆ.
24 ಕ್ಯಾರೆಟ್ನ ಒಂದು ಗ್ರಾಂ ಚಿನ್ನ ಇಂದು ಬೆಳಿಗ್ಗೆ 23 ರೂ. ಏರಿಕೆಯಾಗಿದ್ದು, 15,589 ರೂ.ನಷ್ಟಿದೆ. 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನ 20 ರೂ.ಗೆ ಹೆಚ್ಚಳವಾಗಿದ್ದು, 14,290 ರೂ.ಗೆ ತಲುಪಿದೆ. 18 ಕ್ಯಾರೆಟ್ನ ಚಿನ್ನ ಒಂದು ಗ್ರಾಂಗೆ 16 ರೂ.ನಷ್ಟು ಹೆಚ್ಚಳವಾಗಿದ್ದು, 11,692 ರೂ.ನಷ್ಟಿದೆ.
ಚಿನ್ನದಂತೆ ಪ್ಲಾಟಿನಂ ಆಭರಣಗಳ ಬೆಲೆಯೂ ಹೆಚ್ಚಳವಾಗಿದ್ದು, 10 ಗ್ರಾಂಗೆ 53,670 ರೂ.ನಷ್ಟಿದೆ. ಆ.11 ರಂದು ಒಂದು ಕೆಜಿ ಬೆಳ್ಳಿಗೆ 10 ಸಾವಿರ ರೂ.ನಷ್ಟು ಏರಿಕೆಯಾಗಿ, 2,55,000 ರೂ.ಗೆ ತಲುಪಿತ್ತು.
ಆ.14 ರಂದು ಒಂದು ಕೆಜಿ ಬೆಳ್ಳಿಗೆ 5 ಸಾವಿರ ರೂ.ಗಳಷ್ಟು ಇಳಿಕೆಯಾಗಿ 2.50 ಲಕ್ಷ ರೂ.ನಷ್ಟಿತ್ತು. ಅಂದಿನಿಂದ ಇಂದಿನರೆಗೆ ಯಾವುದೇ ಏರಿಳಿತವಿಲ್ಲದೆ ಅದೇ ದರ ಮುಂದುವರೆದಿದೆ.
ಸದ್ಯಕ್ಕೆ ಚಿನ್ನ, ಬೆಳ್ಳಿ ದರಗಳು ಇಳಿಮುಖವಾಗುವ ಸಾಧ್ಯತೆ ವಿರಳ ಎಂಬುದು ವರ್ತಕರ ಅಭಿಪ್ರಾಯವಾಗಿದೆ. ಅಲ್ಲದೆ, ಆ.21 ರಂದು ವರಮಹಾಲಕ್ಷ್ಮಿ ಇರುವುದರಿಂದ ಈ ವಾರ ಚಿನ್ನ, ಬೆಳ್ಳಿ ಖರೀದಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ.
