ನವದೆಹಲಿ,ಆ.18- ಭಾರತದಲ್ಲಿ ನಾಗರಿಕರಿಗೆ ನೀಡಲಾಗಿರುವ ಮತದಾರರ ಗುರುತಿನ ಚೀಟಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಿದಾ ಆಗಿದ್ದಾರೆ. ಅಮೆರಿಕದಲ್ಲಿ ಮತದಾನಕ್ಕೆ ಕಡ್ಡಾಯ ಫೋಟೋ ಗುರುತಿನ ಚೀಟಿ ಹಾಗೂ ಮತದಾರರ ನೋಂದಣಿಗೆ ಪೌರತ್ವದ ದಾಖಲೆ ಅಗತ್ಯವಿರಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರೂಥ್ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಒತ್ತಾಯಿಸಿದ್ದಾರೆ.
ಭಾರತದ ಚುನಾವಣಾ ವ್ಯವಸ್ಥೆಯನ್ನು ಉಲ್ಲೇಖಿಸಿರುವ ಟ್ರಂಪ್, ಅಮೆರಿಕದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸುವ ಸೇವ್ ಅಮೆರಿಕಾ ಆ್ಯಕ್ಟ್ ಜಾರಿಗೆ ತರಲು ಅಮೆರಿಕ ಸಂಸತ್ಗೆ ಕರೆ ನೀಡಿದ್ದಾರೆ.
ಭಾರತದ ಕಳೆದ ಲೋಕಸಭಾ ಚುನಾವಣೆಯ ಉದಾಹರಣೆ ನೀಡಿರುವ ಟ್ರಂಪ್, ಸುಮಾರು 64.6 ಕೋಟಿ ಮತದಾರರು ಮತ ಚಲಾಯಿಸಿದ್ದು, ಶೇಕಡಾ ಒಂದಕ್ಕಿಂತಲೂ ಕಡಿಮೆ ಮತದಾರರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು ಎಂದು ಹೇಳಿದ್ದಾರೆ. ಅಲ್ಲದೆ, ಮತದಾರರು ಮಾನ್ಯ ಫೋಟೋ ಗುರುತಿನ ದಾಖಲೆ ಹೊಂದಿದ್ದರು ಎಂದು ಅವರು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಟ್ರಂಪ್ ಅವರ ಪ್ರಕಾರ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು, ಅಮೆರಿಕದ ಚುನಾವಣೆಯಲ್ಲಿ ಮಾನ್ಯ ಫೋಟೋ ಐಡಿ ಇಲ್ಲದೆ ಹೇಗೆ ಮತದಾನ ನಡೆಯುತ್ತದೆ ಎಂಬ ಪ್ರಶ್ನೆಯನ್ನು ಅಮೆರಿಕದ ಆಡಳಿತದ ಮುಂದಿಟ್ಟಿದ್ದರು. ಈ ವಿಚಾರವನ್ನು ಉಲ್ಲೇಖಿಸಿರುವ ಟ್ರಂಪ್, ಅಮೆರಿಕದಲ್ಲೂ ಮತದಾರರ ಗುರುತನ್ನು ಖಚಿತಪಡಿಸುವ ವ್ಯವಸ್ಥೆ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಸೇವ್ ಅಮೆರಿಕಾ ಆ್ಯಕ್ಟ್ ಎನ್ನುವುದು ಅಮೆರಿಕದ ಫೆಡರಲ್ ಚುನಾವಣೆಗಳಲ್ಲಿ ಮತದಾರರ ಅರ್ಹತೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿಸುವ ಉದ್ದೇಶ ಹೊಂದಿರುವ ಮಸೂದೆಯಾಗಿದೆ. ಮತದಾರರು ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅಮೆರಿಕದ ಪೌರತ್ವದ ಪುರಾವೆ ನೀಡಬೇಕು ಹಾಗೂ ಫೆಡರಲ್ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಮಾನ್ಯ ಗುರುತಿನ ದಾಖಲೆ ತೋರಿಸಬೇಕು ಎಂಬುದು ಮಸೂದೆಯ ಪ್ರಮುಖ ಅಂಶವಾಗಿದೆ.
ಮಸೂದೆಯು ಮತದಾರರ ಪಟ್ಟಿಗಳಿಂದ ಅಮೆರಿಕದ ನಾಗರಿಕರಲ್ಲದವರ ಹೆಸರುಗಳನ್ನು ತೆಗೆದುಹಾಕಲು ರಾಜ್ಯಗಳಿಗೆ ನಿರ್ದೇಶನ ನೀಡುವ ಪ್ರಸ್ತಾವವನ್ನೂ ಒಳಗೊಂಡಿದೆ.ಅಂಚೆ ಮತದಾನದ ಮೇಲೆ ನಿರ್ಬಂಧ ವಿಧಿಸುವ ಪ್ರಸ್ತಾವ. ಅಂಚೆ ಮತದಾನದ ಮೇಲೂ ನಿರ್ಬಂಧ ವಿಧಿಸುವ ಪ್ರಸ್ತಾವವಿದೆ. ಅನಾರೋಗ್ಯ, ಅಂಗವೈಕಲ್ಯ, ಮಿಲಿಟರಿ ಸೇವೆ ಅಥವಾ ಪ್ರಯಾಣದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅಂಚೆ ಮತದಾನಕ್ಕೆ ಅವಕಾಶ ನೀಡುವ ಉದ್ದೇಶವನ್ನು ಮಸೂದೆ ಹೊಂದಿದೆ ಎಂದು ಶ್ವೇತಭವನ ಹೇಳಿದೆ.
ಟ್ರಂಪ್ ಅವರ ನಿಲುವಿಗೆ ಅಮೆರಿಕದ ಭಾರತದ ರಾಯಭಾರಿ ಸೆರ್ಗಿಯೋ ಗೋರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತದ 2024ರ ಲೋಕಸಭಾ ಚುನಾವಣೆಯನ್ನು ಮತದಾರರ ಗುರುತಿನ ದೃಢೀಕರಣದ ಉದಾಹರಣೆಯಾಗಿ ಪ್ರಸ್ತಾಪಿಸಿರುವ ಅವರು, ಭಾರತದಲ್ಲಿ ಕೋಟ್ಯಂತರ ಮತದಾರರಿಗೆ ಗುರುತಿನ ದಾಖಲೆ ಕಡ್ಡಾಯವಾಗಿತ್ತು ಎಂದು ಹೇಳಿದ್ದಾರೆ. ಭಾರತ ಮತ್ತು ಬ್ರೆಜಿಲ್ನಂತಹ ದೇಶಗಳಲ್ಲಿ ಮತದಾರರ ಗುರುತನ್ನು ಬಯೋಮೆಟ್ರಿಕ್ ವ್ಯವಸ್ಥೆಯೊಂದಿಗೆ ಜೋಡಿಸಲಾಗಿದೆ ಎಂದು ಶ್ವೇತಭವನ ಕೂಡ ಹೇಳಿದೆ.
